ಚಾಮರಾಜನಗರದ ರಾಮಸಮುದ್ರದಲ್ಲಿರುವ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ 47ನೇ ವರ್ಷದ ವರ್ಧಂತೋತ್ಸವದ ಪ್ರಯುಕ್ತ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
- Sri Chowdeshwari Vardhanthotsava
ಚಾಮರಾಜನಗರ: ನಗರ ರಾಮಸಮುದ್ರದಲ್ಲಿರುವ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ 47ನೇ ವರ್ಷದ ವರ್ಧಂತೋತ್ಸವ ಹಾಗೂ ದೊಡ್ಡ ಕತ್ತಿ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ದೇವಾಂಗ ಕುಲಬಾಂಧವರು ಅಲಗು ಸೇವೆ ಮೆರವಣಿಗೆಯನ್ನು ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ನಡೆಸಿದರು.
ಶ್ರೀರಾಮಲಿಂಗೇಶ್ವರ ಹಾಗೂ ಶ್ರೀಚೌಡೇಶ್ವರಿ ಅಮ್ಮನವರಿಗೆ ಅಭಿಷೇಕ ಕಾರ್ಯಕ್ರಮಗಳು ಕೈಗೊಂಡು ಬೆಳಗ್ಗೆ 8.24ಕ್ಕೆ ಸಲ್ಲುವ ಶುಭ ಲಗ್ನದಲ್ಲಿ ಅಲಗು ಸೇವೆ ಪ್ರಾರಂಭಗೊಂಡಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ದೇವಾಂಗ ಸಮಾಜದ ಕುಲಬಾಂಧವರು ತಾಯಿ ಚೌಡೇಶ್ವರಿ ದೇವಿಯನ್ನು ಸ್ಮರಿಸಿ ಕತ್ತಿಯನ್ನು ತಮ್ಮ ಎದೆ ಭಾಗಕ್ಕೆ ಸ್ಪರ್ಶಿಸುವ ಮೂಲಕ ತಮ್ಮ ಭಕ್ತಿ ಪರಾಕಾಷ್ಟೆಯನ್ನು ಸಮರ್ಪಿಸಿದರು.
ಕತ್ತಿ ಹಬ್ಬದ ಅಂಗವಾಗಿ ದೇವಸ್ಥಾನದ ಬೀದಿಯನ್ನು ತಳಿರು ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ವಿವಿಧ ಕಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ಚೌಡೇಶ್ವರಿ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.