ಕೊಳ್ಳೇಗಾಲ ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾ ನದಲ್ಲಿ ಜಗಜ್ಯೋತಿ ಶ್ರೀಬಸವೇಶ್ವರರ ಜಯಂತ್ಯುತ್ಸವ ವೇದಿಕೆ ಕಾರ್ಯಕ್ರಮಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್, ಆರ್.ನರೇಂದ್ರ ಇದ್ದರು. 
ಚಾಮರಾಜನಗರ

ಕಣ್ಮನ ಸೆಳೆದ ಬಸವ ಜಯಂತಿ ಮೆರವಣಿಗೆ

ಕೊಳ್ಳೇಗಾಲ: ಬಸವ ಜಯಂತಿ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಬಸವೇಶ್ವರರ ಮೆರವಣಿಗೆ ಕಣ್ಮನ ಸೆಳೆಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ತಾಲೂಕು ಘಟಕ, ಜಾಗತಿಕ ಲಿಂಗಾಯತ ಮಹಾಸಭಾ, ಶ್ರೀಜಗದ್ಗುರು ಪಂಚಾಚಾರ್ಯ ಸಮಾಜ, ವೀರಶೈವ ಲಿಂಗಾಯತ ನೌಕರರ ಬಸವ ಸೇವಾ ಸಮಿತಿ, ಶ್ರಿಬಸವ ಸೇವಾ ಪತ್ತಿನ ಸಹಕಾರ ಸಂಘ, ಬಸವ ಮಹಾಮನೆ, ವೀರಶೈವ ಲಿಂಗಾಯತ ಮಹಿಳಾ ಘಟಕ, ಅಕ್ಕನ ಬಳಗ, ಕದಳಿ ವೇದಿಕೆ ವತಿಯಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಂದಿಧ್ವಜ ಕಂಬಕ್ಕೆ ಸುತ್ತೂರಿನ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮಾತನಾಡಿದ ಅವರು, ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲಕವಾಗಿ ಬಸವಣ್ಣನವರ ಕನಸುಗಳು ನನಸಾಗುತ್ತಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಸಮಾನತೆ, ಕಾಯಕ, ದಾಸೋಹದ ಅಗತ್ಯತೆಯನ್ನು ಅರಿತು ಬಸವಣ್ಣ ವಚನ ಕ್ರಾಂತಿ ಮಾಡಿದರು. ಮನುಷ್ಯ ಯಾವಾಗಲೂ ಕಾನೂನಿನ ಚೌಕಟ್ಟಿನಲ್ಲಿ ತನ್ನ ಬದುಕನ್ನು ಸುಧಾರಿಸಿಕೊಳ್ಳುವುದಕ್ಕಿಂತ ತನ್ನ ಅಂತರಂಗದ ಸಾಕ್ಷಿಯಾಗಿ ಬದುಕನ್ನು ಬದಲಿಸಿಕೊಳ್ಳಬೇಕು ಎಂದು ಮಹಾತ್ಮರು ಹೇಳುತ್ತಾರೆ ಎಂದು ತಿಳಿಸಿದರು.
ಬಸವಣ್ಣನವರ ಆದರ್ಶಗಳನ್ನು ಅನುಸರಿಸಿದರೆ ಬಸವ ಜಯಂತಿ ಅರ್ಥ ಪಡೆದುಕೊಳ್ಳಲಿದೆ. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕೊಳ್ಳೇಗಾಲ ಪಟ್ಟಣದ ಪ್ರಮುಖ ವೃತ್ತಕ್ಕೆ ಬಸವೇಶ್ವರ ವೃತ್ತ ನಾಮಕರಣ ಮಾಡುವ ಕಾರ್ಯವನ್ನು ನಗರಸಭೆಯಲ್ಲಿ ನಿರ್ಣಯಿಸುವುದಾಗಿ ತಿಳಿಸಿದ್ದಾರೆ ಎಂದರು.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದೇವನೂರು ಶ್ರೀಗುರುಮಲ್ಲೇಶ್ವರ ದಾಸೋಹ ಮಠದ ಮಠ ಮಹಾಂತ ಸ್ವಾಮೀಜಿ, ಗುಂಡೇಗಾಲ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಹರಗುರು ಚರಮೂರ್ತಿಗಳು, ಶಾಸಕರಾದ ಎಂ.ಆರ್.ಮಂಜುನಾಥ್, ಎಚ್.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಆರ್.ನರೇಂದ್ರ, ಎಸ್.ಬಾಲರಾಜು, ಜಿ.ಎನ್.ನಂಜುಂಡಸ್ವಾಮಿ, ಪರಿಮಳಾ ನಾಗಪ್ಪ, ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಬೆಂಗಳೂರು ಸಿಸಿಬಿ ಎಸಿಪಿ ಮಹಾನಂದ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್, ಬಿಜೆಪಿ ಮುಖಂಡರಾದ ನಿಶಾಂತ್, ಪ್ರೀತನ್ ನಾಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ ಹಾಗು ವೀರಶೈವ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಇತರರಿದ್ದರು.
ಕಲಾತಂಡಗಳೊಂದಿಗೆ ಮೆರವಣಿಗೆ: ಪಟ್ಟಣ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು. ಮಂಗಳವಾದ್ಯ, ತಮಟೆ, ನಗಾರಿ, ವೀರಗಾಸೆ ಕುಣಿತ, ಮಹಿಳೆಯರ ಪೂಜಾ ಕುಣಿತ, ನಂದಿಧ್ವಜ ಕುಣಿತ ಕಲಾವಿದರೊಂದಿಗೆ ಭಕ್ತರು ಸಾಗಿದರು. ತಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಡಾ.ರಾಜ್‌ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಜೆಎಸ್‌ಎಸ್ ಮಹಿಳಾ ಕಾಲೇಜು ತಲುಪಿತು.
ಉಪಾಹಾರ ವ್ಯವಸ್ಥೆ: ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ 2 ಸಾವಿರ ಜನರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಜೆಎಸ್‌ಎಸ್ ಕಾಲೇಜಿನಲ್ಲಿ 8 ಸಾವಿರ ಜನರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆಯ ಎಲ್ಲ ತಾಲೂಕಿನ ಸಮಾಜದ ಸಂಘಟನೆಗಳ ಪದಾಧಿಕಾರಿಗಳು, ಭಕ್ತರು, ವಿವಿಧ ಕೋಮಿನ ಮುಖಂಡರು ಪಾಲ್ಗೊಂಡಿದ್ದರು.
ವೃತ್ತಕ್ಕೆ ಬಸವೇಶ್ವರರ ಹೆಸರು: ಕೊಳ್ಳೇಗಾಲ ಪಟ್ಟಣದ ಪ್ರಮುಖ ವೃತ್ತಕ್ಕೆ ಬಸವೇಶ್ವರರ ಹೆಸರು ಇಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಸುತ್ತೂರು ಶ್ರೀಗಳು ಕೊಳ್ಳೇಗಾಲ ಪಟ್ಟಣದ ಪ್ರಮುಖ ವೃತ್ತಕ್ಕೆ ಶ್ರೀಬಸವೇಶ್ವರ ವೃತ್ತ ಎಂಬ ಹೆಸರನ್ನು ನಾಮಕರಣ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ. ಅದರಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಬಸವೇಶ್ವರರ ವೃತ್ತದ ನಾಮಕರಣ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.