ಮಣ್ಣಿತ್ತಿನ ಅಮಾವಾಸ್ಯೆ ಹಿನ್ನೆಲೆ ಶ್ರೀಕ್ಷೇತ್ರ ಕುರುಬನಕಟ್ಟೆಗೆ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕೊಳ್ಳೇಗಾಲ: ಮಣ್ಣಿತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಶ್ರೀ ಕ್ಷೇತ್ರ ಕುರುಬನಕಟ್ಟೆಯಲ್ಲಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಂಡಾಯಗಳಿಗೆ ಹೂ ಹೊಂಬಾಳೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.ವಿಶೇಷವಾಗಿ ಭಕ್ತರು ಅಮಾವಾಸ್ಯೆ ಪ್ರಯುಕ್ತ ತಡೆ ಹೊಡಿಸಿದರು. ನಂತರ ದೇವರ ಗದ್ದುಗೆ ದರ್ಶನ ಪಡೆದರು.
ಕೊಳ್ಳೇಗಾಲ ಪಟ್ಟಣದಲ್ಲಿರುವ ಐತಿಹಾಸಿಕ ಮರಡಿಗುಡ್ಡ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಅರ್ಚಕ ಶ್ರೀನಿವಾಸ್ ಶಾಸ್ತ್ರಿ ನೇತೃತ್ವದಲ್ಲಿ ಮುಂಜಾನೆಯಿಂದ ರುದ್ರಾ ಭಿಷೇಕ, ಮಹಾಮಂಗಳಾರತಿ ಸೇರಿದಂತೆ ಇತರ ಪೂಜಾ ಕೈಂಕರ್ಯ ನೆರವೇರಿತು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಹಣ್ಣು, ಕಾಯಿ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಂಡರು. ಅಲ್ಲದೆ ದೇವಾಲಯ ಪಕ್ಕದಲ್ಲಿ ಶ್ರೀ ಮಹದೇಶ್ವರ ಅನ್ನ ದಾಸೋಹ ಸಮಿತಿಯಿಂದ ನೆರೆದಿದ್ದ ಎಲ್ಲ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅಂತೆಯೇ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ, ಸಿದ್ಧಿವಿನಾಯಕ ಸ್ವಾಮಿ ದೇವಾಲಯ ಸೇರಿದಂತೆ ಇತರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.