ಶ್ರೀಶನೈಶ್ಚರ ಜಯಂತಿ ಹಾಗೂ ಅಮಾವಾಸೆ ಹಿನ್ನ್ನೆಲೆ ಕೊಳ್ಳೇಗಾಲ ಪಟ್ಟಣದ ಬಸ್ತೀಪುರ ಬಡಾವಣೆಯಲ್ಲಿರುವ ಶ್ರೀಶನೈಶ್ಚರಸ್ವಾಮಿ ಮತ್ತು ಛಾಯಾದೇವಿ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕೊಳ್ಳೇಗಾಲ: ಶ್ರೀಶನೈಶ್ಚರ ಜಯಂತಿ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಟ್ಟಣದ ಬಸ್ತೀಪುರ ಬಡಾವಣೆ ಹೊರವಲಯದಲ್ಲಿರುವ ಶ್ರೀ ಶನೈಶ್ಚರಸ್ವಾಮಿ ಮತ್ತು ಛಾಯಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಮುಂಜಾನೆಯಿಂದಲೇ ದೇವರಿಗೆ ಎಣ್ಣೆ ಮಜ್ಜನ, ಎಳ್ಳಿನ ಪೂಜೆ, ಅಭಿಷೇಕ, ತುಳಸಿ ಪೂಜೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಮಹದೇವಪ್ಪ ಮಾತನಾಡಿ, ಶ್ರೀಶನೈಶ್ಚರ ಜಯಂತಿ ಶನಿವಾರ ಬಂದಿರುವುದು ಮಂಗಳಕರವಾಗಿದೆ. ಕಷ್ಟ, ಕಾರ್ಪಣ್ಯ, ಶನಿಯ ಪ್ರಭಾವದಿಂದ ಬಳಲುತ್ತಿರುವ ಜನರು ದೇವಾಲಯಕ್ಕೆ ಭೇಟಿ ನೀಡಿ ಭಕ್ತಿ-ಭಾವದಿಂದ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ದೇವಾಲಯ ಅರ್ಚಕ ಪರಶಿವಮೂರ್ತಿ, ಸೋಮಣ್ಣ ಇತರರು ಇದ್ದರು.