ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪಾರ್ವತಾಂಭ ಬೆಟ್ಟದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.  
ಚಾಮರಾಜನಗರ

ಪಾರ್ವತಾಂಭ ಸಮೇತ ಸೋಮೇಶ್ವರಸ್ವಾಮಿ ಮಹಾರಥೋತ್ಸವ

ಗುಂಡ್ಲುಪೇಟೆ: ತಾಲೂಕಿನ ಕಂದೇಗಾಲ ಸಮೀಪದ ಸ್ಕಂದಗಿರಿ ಪಾರ್ವತಾಂಭ ಬೆಟ್ಟದಲ್ಲಿ ಬುದ್ಧಪೂರ್ಣಿಮೆ ಪ್ರಯುಕ್ತ ಶುಕ್ರವಾರ ಪಾರ್ವತಾಂಭ ಸಮೇತ ಸೋಮೇಶ್ವರಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ರಥೋತ್ಸವ ಹಿನ್ನೆಲೆಯಲ್ಲಿ ದೇವಾಲಯವನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಏ.29 ರಿಂದಲೇ ದೇವಾಲಯದಲ್ಲಿ ಗಣಪತಿಪೂಜೆ, ಶಿವಯಾಗ, ರಥ ಪ್ರತಿಷ್ಠೆ, ರಥ ವಾಸ್ತಬಲಿ, ನವಗ್ರಹ ಪೂಜೆ, ಮಂಟಪೋತ್ಸವ ಇತರೆ ಧಾರ್ಮಿಕ ಕಾರ್ಯಗಳು ಜರುಗಿದವು. ಶುಕ್ರವಾರ ಬೆಳಗ್ಗೆಯಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ಮಂಗಳವಾದ್ಯ, ತಮಟೆ, ಸತ್ತಿಗೆ, ಸುರಪಾನಿ ಮುಂತಾದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ತರಲಾಯಿತು. ದೇವಾಲಯದ ಪಶ್ಚಿಮ ಪಾರ್ಶ್ವದಲ್ಲಿ ಧ್ವಜ, ಪತಾಕೆ, ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಪಾರ್ವತಾಂಭ ಸಮೇತ ಸೋಮೇಶ್ವರಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಇರಿಸಿ ದೇವಾಲಯದ ಪ್ರಧಾನ ಅರ್ಚಕ ಸತೀಶ್ ಮಹಾಮಂಗಳಾರತಿ ನೆರವೇರಿಸಿದರು.
ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ರಥೋತ್ಸವಕ್ಕೆ ಚಾಲನೆ ನೀಡಿದರು.
ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಎಂ.ಎಸ್.ತನ್ಮಯ್ ಇತರರಿದ್ದರು.