ಹನೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಕೆ.ಎನ್ ಚೈತ್ರಾ, ಉಮೇಶ್, ಸುಧನ್ವನಾಗ್ ಇತರರಿದ್ದರು. 
ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • drinking water problem
ಹನೂರು: ಅಧಿಕಾರಿಗಳು ಅಗತ್ಯ ಕ್ರಮವಹಿಸುವುದರ ಮೂಲಕ ಗ್ರಾಮಗಳಲ್ಲಿ ತಲೆದೋರಿರುವ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಸೋಮವಾರ ಸಂಜೆ ಕುಡಿವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಆಯೋಜಿಸಿದ್ಧ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ತಾಲೂಕಿನಲ್ಲಿ ಈ ಬಾರಿ ಮಳೆ ಕೊರತೆಯ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರಲ್ಲೂ ಮಾರ್ಟಳ್ಳಿ, ಕುರಟ್ಟಿ ಹೊಸೂರು, ಶೆಟ್ಟಳ್ಳಿ, ರಾಮಾಪುರ, ದೊಡ್ಡಾಲತ್ತೂರು, ಹೂಗ್ಯಂ, ಮಿಣ್ಯಂ, ಎಲ್ಲೇಮಾಳ, ಬೈಲೂರು, ಹುತ್ತೂರು ಹಾಗೂ ಪಿಜಿ ಪಾಳ್ಯ ಗ್ರಾಪಂನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಜನರಿಗೆ ನೀರೊದಗಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಬೋರ್ ಕೊರೆಯಿಸಿ ನೀರು ಪೂರೈಕೆಗೆ ಮುಂದಾಗಬೇಕು. ಈ ಕಾರ್ಯ ಮೇ ತಿಂಗಳವರೆಗೂ ಮುಂದುವರಿಯಬೇಕು. ಒಟ್ಟಿನಲ್ಲಿ ಗ್ರಾಮಗಳಲ್ಲಿ ಸಮಸ್ಯೆಯಾಗದಂತೆ ಜನರಿಗೆ ಸಮರ್ಪಕ ನೀರು ಪೂರೈಸಲು ಕಾರ್ಯೋನ್ಮುಖರಾಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ಅನುದಾನಕ್ಕೆ ಬೇಡಿಕೆ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ಮನೆಗೂ ಸಮರ್ಪಕ ನೀರು ಪೂರೈಸುವ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಆದರೆ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ತಡೆಯಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೆಲಸ ಕಾರ್ಯರೂಪಕ್ಕೆ ಬರಲಿದೆ. ಇನ್ನು ತಾಲೂಕಿನ ಕುಡಿವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ. ಅಗತ್ಯ ಅನುದಾನವನ್ನು ನೀಡುವಂತೆ ಮನವಿ ಮಾಡಲಾಗಿದ್ದು, ಭರವಸೆ ನೀಡಿದ್ದಾರೆ. ಅನುದಾನ ದೊರೆತರೆ ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಎನ್ ಚೈತ್ರಾ, ತಾಪಂ ಇಒ ಉಮೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್, ಎಇ ಶಶಿಕುಮಾರ್ ಹಾಗೂ ಪಿಡಿಒಗಳು ಇದ್ದರು.