ತಾಳುಬೆಟ್ಟದ ಮೂಲಕ ಪಾದಯಾತ್ರಿಗಳು ತೆರಳುವ ಮೆಟ್ಟಲಿನ ಮಾರ್ಗದಲ್ಲಿ ಕಾಣಿಸಿಕೊಂಡ ಒಂಟಿ ಸಲಗ.
- ಚಿರತೆ ಹಾವಳಿ ಬೆನ್ನಲ್ಲೇ ಕಾಡಾನೆ ಭೀತಿ
- ಪಟಾಕಿ ಸಿಡಿಸಿ ಕಾಡಿಗೆ ಓಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಾಳುಬೆಟ್ಟ ಮಾರ್ಗದ ಪಾದಯಾತ್ರಿಗಳು ತೆರಳುವ ಮೆಟ್ಟಿಲುಗಳ ಬಳಿ ಬುಧವಾರ ಒಂಟಿ ಸಲಗವೊಂದು ಕಾಣಿಸಿಕೊಂಡಿತ್ತು.
ಈ ಮಾರ್ಗದಲ್ಲಿ ಚಿರತೆ ಹಾವಳಿ ಒಂದೆಡೆಯಾದರೆ, ಕಾಡಾನೆಯು ಆಗಾಗ್ಗೆ ಭಕ್ತರಿಗೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಮಹಾ ಶಿವರಾತ್ರಿ ಜಾತ್ರಾ ಹಿನ್ನೆಲೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ಮಾರ್ಗದಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಫೆ.15 ರಂದು ಸಂಜೆ 4ರ ವೇಳೆಯಲ್ಲಿ ತಾಳುಬೆಟ್ಟದ ಮಾರ್ಗದ ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಕಾಣಿಸಿಕೊಂಡಿದ್ದ ಒಂಟಿ ಸಲಗ ಬುಧವಾರ ಭಕ್ತರು ಕಾಲ್ನಡಿಗೆಯಲ್ಲಿ ತೆರಳುವ ಮೆಟ್ಟಿಲುಗಳ ಬಳಿ ಕಾಣಿಸಿಕೊಂಡಿದೆ. ಈ ಬಗ್ಗೆ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸುವುದರ ಮೂಲಕ ಆನೆಯನ್ನು ಕಾಡಿನೊಳಗೆ ಕಳುಹಿಸಿದರು. ಸದ್ಯ ಈ ಮಾರ್ಗದಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ತೆರಳುವುದು ಸ್ಥಗಿತಗೊಂಡಿರುವುದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.