ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಡಿಎಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್ಪಿ ಎಂ.ಮುತ್ತುರಾಜು ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ. ಆರ್.ಗಿರೀಶ್, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್, ವಲಯ ಅರಣ್ಯಾಧಿಕಾರಿ ಮಂಜುನಾಥ್ ಓಣಿಕೇರಿ ಇತರರು ಹಾಜರಿದ್ದರು. 
ಚಾಮರಾಜನಗರ

ವೃತ್ತಿಪರತೆ ಹೆಚ್ಚಳಕ್ಕೆ ಕೌಶಲ್ಯ ಅನಿವಾರ್ಯ

ಪ್ರಮುಖ ಮುಖ್ಯಾಂಶಗಳು

  • ಎಸ್ಪಿ ಮುತ್ತುರಾಜ್ ಹೇಳಿಕೆ
  • ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ
ಚಾಮರಾಜನಗರ: ವಿದ್ಯೆ ಬುದ್ಧಿಗೆ ತಕ್ಕಂತೆ ಉದ್ಯೋಗ ಸಿಗಬೇಕಾದರೆ ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಹೇಳಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿ ಡಿಎಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಹತೆ, ಬುದ್ಧಿ ಇದ್ದರಷ್ಟೇ ಸಾಲದು. ಅದಕ್ಕೆ ತಕ್ಕಂತೆ ಕೌಶಲ್ಯ ಇರಬೇಕು. ಆಗ ನಮ್ಮ ಸೇವೆ ಮತ್ತು ಉತ್ಪನ್ನಗಳಲ್ಲಿ ಮೌಲ್ಯ ಹೆಚ್ಚಾಗಿ ಅದರ ಬೇಡಿಕೆ ಹೆಚ್ಚಾಗುತ್ತದೆ. ಆದ್ದರಿಂದ ಇಂದಿನ ಯುವಕ ಯುವತಿಯರು ವಿದ್ಯಾರ್ಹತೆಗೆ ತಕ್ಕಂತೆ ವಿವಿಧ ಕೌಶಲ್ಯಗಳ ತರಬೇತಿ ಹೊಂದಬೇಕು. ಆಗ ಉದ್ಯೋಗ ಸುಲಭವಾಗಿ ಸಿಗುತ್ತದೆ. ಇಲ್ಲವಾದರೆ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಕೂರಬೇಕಾಗುತ್ತದೆ. ಅದು ಎಲ್ಲರಿಗೂ ಸಿಗುವುದಿಲ್ಲ ಎಂದರು.
ಒಂದು ಬಟ್ಟೆ ಹೊಲಿಯುವುದಕ್ಕೂ ಅವಕಾಶವಿಲ್ಲದೆ ಪರದಾಡುತ್ತಿದ್ದ ಟೈಲರ್ ಒಬ್ಬ ಕೌಶಲ್ಯ ತರಬೇತಿ ಪಡೆದ ನಂತರ ತನ್ನ ವೃತ್ತಿಪರತೆ ಹೆಚ್ಚಿಸಿಕೊಂಡು ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದಾನೆ ಎಂದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ. ಆರ್.ಗಿರೀಶ್ ಮಾತನಾಡಿ, ತೋಟಗಾರಿಕೆ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಿದ್ದು, ಕೌಶಲ್ಯ ತರಬೇತಿಗಳನ್ನು ಪಡೆದರೆ ಬದಲಾದ ಪೈಪೋಟಿಗೆ ತಕ್ಕಂತೆ ಉದ್ಯೋಗ ಅವಕಾಶಗಳು ಲಭಿಸುತ್ತವೆ. ಹಾಗೆಯೇ ಸ್ವಯಂ ಉದ್ಯೋಗಕ್ಕೂ ಸಾಕಷ್ಟು ಅವಕಾಶಗಳಿವೆ. ಇದನ್ನು ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್ ಮಾತನಾಡಿ, ರೀಲ್ಸ್ ನೋಡುವ ಚಟ ಯುವ ಜನತೆಯಲ್ಲಿ ಹೆಚ್ಚಾಗಿದ್ದು, ಇದರಿಂದ ಮೊಬೈಲಿಂದಾಗಿರುವ ದುಷ್ಪರಿಣಾಮ ವಿಪರೀತವಾಗಿದೆ ಎಂದರು. ಮೊಬೈಲ್ ಸದ್ಬಳಕೆ ಕುರಿತು ಅನೇಕ ಸಲಹೆಗಳನ್ನು ನೀಡಿದರು.
ವಲಯ ಅರಣ್ಯಾಧಿಕಾರಿ ಮಂಜುನಾಥ್ ಓಣಿಕೇರಿ ಮಾತನಾಡಿ, ಉತ್ತಮ ಕೌಶಲ್ಯ ರೂಡಿಸಿಕೊಂಡರೆ ಅರಣ್ಯ ಮತ್ತು ಕೃಷಿ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ಭಾಗದ ಜನತೆ ಡಿಎಂ ಚಾರಿಟಬಲ್ ಟ್ರಸ್ಟ್ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಇದೇ ವೇಳೆ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿನ ಗೌರವ ಸಲಹೆಗಾರರಾದ ಜೈ ಶಂಕರ್, ರಾಜು ಎಂ, ಕೌಶಲ್ಯ ಕೇಂದ್ರದ ಪರಮೇಶ್, ಮಧುಶ್ರೀ, ಸುಮತಿ ಹಾಗೂ ಕುಮಾರಿ ಹಾಜರಿದ್ದರು.