ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ ಕಾಮಗಾರಿಯನ್ನು ಪೊಲೀಸರು ಪರಿಶೀಲಿಸಿದರು. ಶಶಿಧರ್, ಸ್ನೇಹಾರಾಜ್ ಇತರರಿದ್ದರು.
- 21ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ
ಗುಂಡ್ಲುಪೇಟೆ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಏ.21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಗುರುವಾರ ಸ್ಥಳ ಪರಿಶೀಲಿಸಿದರು.
ಹೆಲಿಕಾಪ್ಟರ್ ಮೂಲಕ ಪಟ್ಟಣಕ್ಕೆ ಆಗಮಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿನ 110 ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸುವ ಯೋಜನೆಗೆ ಭೂಮಿಪೂಜೆ, ಬೇಗೂರು ಹತ್ತಿ ಮಾರುಕಟ್ಟೆ, ಅರೇಪುರದ ವಿದ್ಯುತ್ ಪ್ರಸರಣಾ ಕೇಂದ್ರ, ತೆರಕಣಾಂಬಿಯ ಆಸ್ಪತ್ರೆಯ ನೂತನ ಕಟ್ಟಡ ಹಾಗೂ ಬೊಮ್ಮನಹಳ್ಳಿ ಸಮೀಪದ ಡಾ.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ತಾಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆಗೊಳಿಸುವರು.
ಈ ನಡುವೆ ವನ್ಯಜೀವಿಗಳ ಸಂಘರ್ಷಕ್ಕೆ ಕಾರಣವಾದ ಸಫಾರಿ ಬಂದ್, ಕೇರಳಕ್ಕೆ ಕಲ್ಲು ಸಾಗಣೆ ಮಾಡುತ್ತಿರುವ ಟಿಪ್ಪರ್‌ಗಳ ನಿಲುಗಡೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರೈತಸಂಘ ಕಳೆದ ಹನ್ನೆರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲ ರೈತ ಸಂಘಟನೆಯವರು ಮುಖ್ಯಮಂತ್ರಿಗಳಿಗೆ ಕಪ್ಪುಬಾವುಟ ಪ್ರದರ್ಶನ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಡಿಷನಲ್ ಎಸ್‌ಪಿ ಶಶಿಧರ್, ಡಿವೈಎಸ್‌ಪಿ ಸ್ನೇಹಾರಾಜ್ ಕಾರ್ಯಕ್ರಮದ ವೇದಿಕೆ ನಿರ್ಮಿಸುತ್ತಿರುವ ಡಿ.ದೇವರಾಜ ಅರಸು ಕ್ರೀಡಾಂಗಣ, ಹೆಲಿಪ್ಯಾಡ್ ನಿರ್ಮಿಸುವ ಡಾ.ಬಿ.ಆರ್.ಅಂಬೇಡ್ಕರ್‌ಭವನದ ಎದುರಿನ ಸ್ಥಳ, ವಾಲ್ಮೀಕಿ ಭವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.