ಯಳಂದೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಜೆ.ಯೋಗೇಶ್, ಎಸ್.ಪ್ರಭುಪ್ರಸಾದ್, ಲಿಂಗರಾಜಮೂರ್ತಿ, ಕಂದಹಳ್ಳಿ ನಂಜುಂಡಸ್ವಾಮಿ ಇದ್ದರು.
- ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ
ಯಳಂದೂರು: ಪಟ್ಟಣದಲ್ಲಿ 80*60 ಅಳತೆಯ ಖಾಲಿ ನಿವೇಶನವನ್ನು ಶಿಕ್ಷಕರ ಭವನ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಇಲ್ಲಿ ಸುಂದರ ಭವನ ನಿರ್ಮಿಸಿಕೊಳ್ಳಲು ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಶಿಕ್ಷಕರಿಗೆ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಹು ವರ್ಷಗಳಿಂದ ಇಲ್ಲಿ ಶಿಕ್ಷಕರಿಗೆ ಭವನ ನಿರ್ಮಾಣಕ್ಕೆ ನಿವೇಶನದ ಸಮಸ್ಯೆ ಇತ್ತು. ಇದನ್ನು ನಿವಾರಿಸಲು ಕ್ರಮ ವಹಿಸಿದ್ದೇನೆ. ಇಲ್ಲಿ ಭವನ ನಿರ್ಮಾಣಕ್ಕೆ ಬೇಕಾದ ಅಗತ್ಯ ನೆರವು ನೀಡಲು ನಾನು ಕ್ರಮ ವಹಿಸುತ್ತೇನೆ ಎಂದರು. ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ಇವರನ್ನು ಸಂಸ್ಕಾರವಂತರಾಗಿ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ನಮ್ಮ ದೇಶದಲ್ಲಿ ಇನ್ನು ಕೂಡ ಜಾತೀಯತೆ ಇದೆ. ಇದು ತೊಲಗಬೇಕು. ಮಂಡಲ್ ಆಯೋಗ, ಹಾವನೂರು ಆಯೋಗಗಳ ಮೂಲಕ ಪ್ರತಿಯೊಂದು ಜಾತಿ, ಧರ್ಮದವರೂ ಮೀಸಲಾತಿ ಪಡೆದುಕೊಂಡಿದ್ದರೆ. ಆದರೆ ಹೃದಯ ವೈಶಾಲ್ಯ ಕಡಿಮೆ ಇದೆ. ಭಾರತೀಯತೆಯ ನಿಜವಾದ ಅರ್ಥ ಎಲ್ಲರೂ ಒಂದೆ ಎಂಬ ಭಾವ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರ ಬಿಪಿನ್ ನಾಗರಾಜು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ನಾವು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹುಟ್ಟು ಹಬ್ಬ ಅಂಗವಾಗಿ ಆಚರಿಸುತ್ತೇವೆೆ. ಶಿಕ್ಷಕರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೋಧನೆ ಮಾಡಬೇಕು, ಜಾತಿ, ಧರ್ಮದ ವಿಷಬೀಜ ಬಿತ್ತಬಾರದು ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಸಾಧಕ ಶಿಕ್ಷಕರನ್ನುಸನ್ಮಾನಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಎಸ್.ಪ್ರಭುಪ್ರಸಾದ್, ಲಿಂಗರಾಜಮೂರ್ತಿ, ಕಂದಹಳ್ಳಿ ನಂಜುಂಡಸ್ವಾಮಿ, ಇಒ ಎ.ಬಿ.ವೇಣು, ಸಿಪಿಐ ಸುಬ್ರಹ್ಮಣ್ಯ, ಬಿಇಒ ಎಂ.ಮಾರಯ್ಯ, ಬಿಆರ್‌ಸಿಸಿ ಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಶಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಮ್ಮನಪುರ ಮಹೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ಮಂಜುನಾಥ, ವೀರಭದ್ರಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೋಮಣ್ಣ ನಂಜುಂಡಯ್ಯ, ಶಿವಲಂಕಾರ್, ಪ್ರಮೋದ್ ಚಂದ್ರನ್ ಇತರರು ಇದ್ದರು.