ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ವಾರ್ಡ್‌ಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಭೇಟಿ ನೀಡಿ ಒಳರೋಗಿಯೊಬ್ಬರ ಕ್ಷೇಮಾ ವಿಚಾರಿಸಿದರು. ಡಾ.ಮಂಜುನಾಥ್, ಡಾ.ಮಾರುತಿ ಇನ್ನಿತರರಿದ್ದರು.
- ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅನಿರೀಕ್ಷಿತ ಭೇಟಿ
- ಹಾಸ್ಟೆಲ್, ಶಾಲೆ, ಅಂಗನವಾಡಿ ಕೇಂದ್ರಗಳಿಗೂ ಭೇಟಿ
- ವಿವಿಧ ಇಲಾಖೆ ಅಧಿಕಾರಿಗಳಿಗೆ ತರಾಟೆ
ಚಾಮರಾಜನಗರ: ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಗೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಅನಿರೀಕ್ಷಿತವಾಗಿ ಮಂಗಳವಾರ ಭೇಟಿದ್ದ ವೇಳೆ ಸಿಮ್ಸ್ ಆಸ್ಪತ್ರೆಯ ಸಮಸ್ಯೆಗಳ ಅನಾವರಣವಾಯಿತು.
ನಗರದ ಹೊರ ವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯ ಕೀಲು ಮತ್ತು ಮೋಳೆ ವಿಭಾಗದ ವಾರ್ಡ್‌ಗೆ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮೊದಲು ಭೇಟಿ ನೀಡಿ, ಒಳರೋಗಿಗಳಿಗೆ ನೀಡಲಾಗುವ ಊಟದ ಮಾಹಿತಿ ಪುಸ್ತಕವನ್ನು ಪರಿಶೀಲಿಸಿದರು. ಪ್ರತಿಯೊಂದು ವಾರ್ಡ್‌ಗಳಿಗೆ ನೀಡುವ ಆಹಾರದ ವರದಿಯನ್ನು ನೀಡುವಂತೆ ಸೂಚಿಸಿದರು. ರೋಗಿಗಳಿಗೆ ನೀಡುವ ಆಹಾರದ ಮೆನುಚಾರ್ಟ್ ಅನ್ನು ಎ4 ಶೀಟ್‌ನಲ್ಲಿ ಬರೆದು ಅಂಟಿಸಿರುವುದನ್ನು ಕಂಡು ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡರು. ವಾರ್ಡ್‌ನಲ್ಲಿ ಪ್ರತಿಯೊಬ್ಬರಿಗೂ ಮೆನು ಚಾರ್ಟ್ ಕಾಣುವಂತೆ ದೊಡ್ಡದಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದರು. ಬಳಿಕ ಹಲವಾರು ರೋಗಿಗಳ ಯೋಗಕ್ಷೇಮ ವಿಚಾರಿಸಿ, ಊಟದ ವೇಳೆ ಒಂದೇ ಚಪಾತಿ ನೀಡಲಾಗುತ್ತದೆ ಎಂಬ ದೂರುಗಳು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ರೋಗಿಗಳಿಗೆ ಮೆನು ಪ್ರಕಾರವಾಗಿ ಊಟ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿದರು. ಸ್ವತಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಚಿದಂಬರ ಅವರು ಅನ್ನ-ಸಾಂಬಾರ್ ಊಟ ಮಾಡಿ, ಸಾಂಬಾರ್‌ನಲ್ಲಿ ಉಪ್ಪು-ಕಾರ ಇಲ್ಲ ಎಂದು ತಿಳಿಸಿದರು. ಡಾ.ಎಚ್.ಕೃಷ್ಣ ಅವರು ಪ್ರತಿಕ್ರಿಯಿಸಿ, ರೋಗಿಗಳಿಗೆ ಅಗತ್ಯವಾದ ಆಹಾರವನ್ನು ನೀಡಬೇಕು. ಇಲ್ಲವಾದರೇ ಈಗ ಕಾರ್ಯನಿರ್ವಹಿಸುತ್ತಿರುವವರ ಟೆಂಡರ್ ರದ್ದುಗೊಳಿಸಿ, ಬೇರೆಯವರಿಗೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್, ಆಡಳಿತಾಧಿಕಾರಿ ಡಾ.ಮಾರುತಿ, ಡಾ.ಅಭಿಷೇಕ್, ಡಾ.ಮಂಜುನಾಥ್ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ರೋಗಿಗಳಿದ್ದಲ್ಲಿ ಆಹಾರ ನೀಡಿ:
ಆಸ್ಪತ್ರೆಯ ವಾರ್ಡ್‌ಗಳಲ್ಲಿ ಇರುವ ರೋಗಿಗಳ ಬಳಿಗೆ ಆಹಾರವನ್ನು ನೀಡಬೇಕೆ ಹೊರತು, ಯಾವುದೇ ಕಾಣಕ್ಕೂ ಒಂದು ಕಡೆಯಲ್ಲಿ ನಿಂತು ಅವರನ್ನು ಸಾಲುಗಟ್ಟಿಸಿ ಆಹಾರ ನೀಡಬಾರದು ಎಂದು ಡಾ.ಎಚ್.ಕೃಷ್ಣ ಸೂಚಿಸಿದರು. ಈ ವೇಳೆ ಅಂಗವಿಕಲ ರಮೇಶ್ ಎಂಬುವವರು ಮಾತನಾಡಿ, ಆಸ್ಪತ್ರೆಯಲ್ಲಿ ಅಂಗವಿಕಲರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲ. ಆಗಾಗ ಲ್‌ಟಿ ಕೆಟ್ಟು ಹೋಗುತ್ತಿದ್ದು, ಮೇಲಿನ ಮಹಡಿಗೆ ಹೋಗಲು ತೊಂದರೆಯಾಗುತ್ತಿದೆ. ನಮಗೆ ವ್ಹೀಲ್‌ಚೇರ್ ಕೂಡ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮುನ್ನಾ ರಕ್ತಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ, ರಕ್ತ ಪರೀಕ್ಷೆ ವರದಿ ನೀಡುವುದು ತಡವಾಗುತ್ತಿರುವುದರ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪ್ರಶ್ನಿಸಿದರು. ಬೇಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸುವವರ ವಿರುದ್ಧ ಸೂಕ್ತ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.
ವಿವಿಧ ಇಲಾಖೆ ಅಧಿಕಾರಿಗಳಿಗೆ ತರಾಟೆ:
ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅವರು ಸೋಮವಾರವೇ ಸಂತೇಮರಹಳ್ಳಿ, ಆಹಾರ ಇಲಾಖೆ ಗೋಡನ್‌ಗಳು, ಆದರ್ಶ ವಿದ್ಯಾಲಯ, ಪರಿಶಿಷ್ಟ ವರ್ಗಗಳ ಮೆಟ್ರಕ್ ನಂತರದ ಹಾಸ್ಟೆಲ್ ಹಾಗೂ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜುಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಅಲ್ಲಿನ ಅವ್ಯವಸ್ಥೆಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗೋಡನ್‌ಗಳಲ್ಲಿ ಸಿಸಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣ ಹಾಗೂ ಇನ್ನಿತರೆ ಸೌಲಭ್ಯಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಾಲಕರ ಕಾಲೇಜಿನಲ್ಲಿ ಇರುವ ಶೌಚಾಲಯಗಳು ಗಬ್ಬು ನಾರುತ್ತಿದ್ದು, ಈವರೆಗೂ ಅವುಗಳನ್ನು ಸ್ವಚ್ಛಗೊಳಿಸಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಪರಿಶಿಷ್ಟ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಈ ಕೂಡಲೇ ಅವುಗಳನ್ನು ಸರಿಪಡಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಕಾರವಾಗಿ ಸೂಚಿಸಿದರು.
ತಾಲೂಕಿನ ಹರದನಹಳ್ಳಿ ರೈತ ಸಂಪರ್ಕಕ್ಕೆ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಭೇಟಿ ನೀಡಿ, ಲಾನುಭವಿಗಳಿಗೆ ಕರೆ ಮಾಡಿ ಮಾತನಾಡಿ, ಸೌಲಭ್ಯಗಳು ತಲುಪಿರುವ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಕೃಷಿ ಪರಿಕರಗಳನ್ನು ಪರಿಶೀಲಿಸಿದರು. ನಂತರ ಬಂಡಿಗೆರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಲಾನುಭವಿಗಳಿಗೆ ಕರೆಮಾಡಿ ಅಂಗನವಾಡಿ ಕೇಂದ್ರಗಳಿಂದ ನೀಡುತ್ತಿರುವ ಸೌಲಭ್ಯಗಳು ತಲುಪಿದೆಯೇ ಎಂದು ಮಾಹಿತಿ ಪಡೆದುಕೊಂಡರು. ಆಹಾರ ಸಾಮಗ್ರಗಳ ದಾಸ್ತಾನು ಪರಿಶೀಲಿಸಿದರು. ಲಾನುಭವಿಗಳಿಗೆ ನೀಡಲಾದ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ದಾಖಲು ಮಾಡಿಲ್ಲ ಎಂದು ಅಂಗನವಾಡಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ವ್ಯಾಪ್ತಿಗೆ ಬರುವ 14 ಇಲಾಖೆಗಳ ಕಾರ್ಯವೈಖರಿಯನ್ನು ತಿಳಿಯುವ ಉದ್ದೇಶದಿಂದ ಅನಿರೀಕ್ಷಿತವಾಗಿ ಭೇಟಿ ನೀಡುತ್ತಿದ್ದೇನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದು ಕಂಡುಬಂದಿದೆ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಲಾಗುವುದು.
-ಡಾ.ಎಚ್.ಕೃಷ್ಣ, ಅಧ್ಯಕ್ಷ, ರಾಜ್ಯ ಆಹಾರ ಆಯೋಗ