ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಶ್ರೀ ಓಂಕಾರಸಿದ್ದೇಶ್ವರಸ್ವಾಮಿ ಚಿಕ್ಕಜಾತ್ರೆಯಲ್ಲಿ ಮಕ್ಕಳು ಹಾಗೂ ಮಹಿಳೆಯರು ರಥಗಳನ್ನು ಎಳೆಯುತ್ತಿರುವುದು. 
ಚಾಮರಾಜನಗರ

ಶ್ರೀ ಓಂಕಾರ ಸಿದ್ದೇಶ್ವರಸ್ವಾಮಿ ಚಿಕ್ಕಜಾತ್ರೆ ಅದ್ದೂರಿ

ಪ್ರಮುಖ ಮುಖ್ಯಾಂಶಗಳು

  • ರಥ ಎಳೆದ ಮಹಿಳೆಯರು, ಮಕ್ಕಳು
ಗುಂಡ್ಲುಪೇಟೆ: ತಾಲೂಕಿನ ಹೊಣಕನಪುರ ಗ್ರಾಮದ ಸಮೀಪದಲ್ಲಿ ಇರುವ ಶ್ರೀ ಓಂಕಾರ ಸಿದ್ದೇಶ್ವರಸ್ವಾಮಿಯ ಚಿಕ್ಕ ಜಾತ್ರಾ ಮಹೋತ್ಸವ ಭಾನುವಾರ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಈ ಅಂಗವಾಗಿ ಸುತ್ತಮುತ್ತಲ ಗ್ರಾಮದ ಎಳೆಯರು ಹಿರಿಯರ ಸಹಕಾರದೊಂದಿಗೆ ಚಿಕ್ಕಚಿಕ್ಕ ರಥಗಳನ್ನು ನಿರ್ಮಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 7-8 ಕಿ.ಮೀ ದೂರದ ಓಂಕಾರ ಸಿದ್ದೇಶ್ವರಸ್ವಾಮಿ ದೇವಾಲಯದ ಆವರಣಕ್ಕೆ ತಾವೇ ಎಳೆದುತಂದಿದ್ದು ಎಲ್ಲರ ಗಮನ ಸೆಳೆಯಿತು. ಓಂಕಾರ ಸಿದ್ದೇಶ್ವರಸ್ವಾಮಿಯ ಜಾತ್ರೆಯಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ತಾಲೂಕಿನಿಂದ ತೇರು ಹಾಗೂ ವಾನಗಳನ್ನು ಎಳೆದು ತರುವುದು ಹಾಗೂ ಭಾನುವಾರ ನಡೆಯುವ ಚಿಕ್ಕಜಾತ್ರೆಯಲ್ಲಿ ಚಿಕ್ಕಮಕ್ಕಳು ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ.
ಎಡೆಪೂಜೆ ಎಂದು ಕರೆಯುವ ಈ ಚಿಕ್ಕಜಾತ್ರೆಗೆ ಸುತ್ತ-ಮುತ್ತಲ ಗ್ರಾಮಗಳಾದ ಹೊರೆಯಾಲದ, ಬೆಳಚಲವಾಡಿ, ಹೊಣಕನಪುರ, ಚನ್ನವಡೆಯನಪುರ, ಯಡವನಹಳ್ಳಿ, ಹೊಸಪುರ, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಕ್ಕಳುಗಳೂ ಸಹ ಚಿಕ್ಕರಥಗಳನ್ನು ಮಾಡಿ ಎಳೆದುತರುವುದು ವಾಡಿಕೆ ಹಾಗೂ ಚಿಕ್ಕಚಿಕ್ಕ ತೇರು ಎಳೆದು ತಂದರೆ ನಂಜನಗೂಡು ತಾಲ್ಲೂಕಿನ ಕೂಗಲೂರು, ಕೃಷ್ಣಪುರ ಗ್ರಾಮದಿಂದ ವಾನಗಳನ್ನು ದೇವಾಲಯದ ಆವರಣಕ್ಕೆ ತರಲಾಗುತ್ತದೆ.
ಓಂಕಾರ ಸಿದ್ದೇಶ್ವರಸ್ವಾಮಿ ಉತ್ಸವಮೂರ್ತಿಯು ಛತ್ರಿ-ಛಾಮರ, ತಮ್ಮಟೆ, ಸತ್ತಿಗೆ ಬಿರುದುಗಳ ಸಮೇತ ಸೇವಾಲಯದ ಸುತ್ತ ಪ್ರದಕ್ಷಣಿಗೆ ಮುಂದಾದರೆ ಹಿಂಭಾಗದಲ್ಲಿ ಚಿಕ್ಕ-ಚಿಕ್ಕ ರಥಗಳು ಮತ್ತು ವಾನಗಳು 3-4 ಬಾರಿ ಪ್ರದಕ್ಷಿಣೆ ಹಾಕುವುದು ವಿಶೇಷ ಮತ್ತು ಸಂಜೆ ವೇಳೆಗೆ ರಥಗಳನ್ನು ತಮ್ಮ ಗ್ರಾಮಕ್ಕೆ ಎಳೆದುಕೊಂಡು ಹೋಗುವುವುದು ಗ್ರಾಮದ ಛಾವಡಿಗಳಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುವುದು ಮತ್ತೊಂದು ವಿಶೇಷ.
ಸುತ್ತ-ಮುತ್ತಲ ಗ್ರಾಮಗಳ ಮಹಿಳೆಯರು ಉಪಾವಾಸದೊಂದಿಗೆ ದೇವಾಲಯದ ಆವರಣಕ್ಕೆ ತೆರಳಿ ಅಲ್ಲಿಯೇ ಬೆಲ್ಲದನ್ನದ ಪರ್ವ ತಯಾರಿಸಿ ನಂತರ ಈ ಅನ್ನವನ್ನು ದೇವಾಲಯದೊಳಗೆ ಕೊಂಡೊಯ್ದು ಪೂಜೆಸಲ್ಲಿಸಿದ ನಂತರ ಉಪಹಾರ ಸೇವಿಸಿದರು. ಈ ಚಿಕ್ಕಜಾತ್ರೆಯಲ್ಲಿ ಇದು ವಿಶೇಷತೆಯಿಂದ ಕೂಡಿದ್ದು, ಅಧಿಕ ಸಂಖ್ಯೆಯಲ್ಲಿ ರೈತ ಮಹಿಳೆಯರು ಎತ್ತಿನಗಾಡಿಗಳಲ್ಲಿ ತೆರಳುತ್ತಾರೆ. ಈ ಜಾತ್ರಾ ಮಹೋತ್ಸವಕ್ಕೆ ಅಕ್ಕ-ಪಕ್ಕದ ಗ್ರಾಮಗಳಾದ ಕಬ್ಬಹಳ್ಳಿ, ನಿಟ್ರೆ, ಹಿರೀಬೇಗೂರು, ಗುಂಡ್ಲುಪೇಟೆ, ಬೇಗೂರು, ಚಿಕ್ಕಾಟಿ, ತೊಂಡವಾಡಿ, ಶೆಟ್ಟಹಳ್ಳಿ, ಆಲತ್ತೂರು, ರಾಘವಾಪುರ ಸೇರಿದಂತೆ ನೆರೆಹೊರೆಯ ಗ್ರಾಮಗಳ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.