ಹನೂರಿನ ಕಾಂಗ್ರೆಸ್ ಕಚೇರಿಯಲ್ಲಿ ಎಂಸಿಡಿಸಿಸಿ ನಿರ್ದೇಶಕ ಆರ್.ನರೇಂದ್ರ ಅವರನ್ನು ಕಾರ್ಯಕರ್ತರು ಸನ್ಮಾನಿಸಿದರು. ನಾಗೇಂದ್ರ, ಹರೀಶ್‌ಕುಮಾರ್, ಗಿರೀಶ್, ಚಿಕ್ಕತಮ್ಮಯ್ಯ, ಬಸವರಾಜು ಇತರರು ಇದ್ದರು.  
ಚಾಮರಾಜನಗರ

ಶ್ರೀ ಬೆಟ್ಟಳ್ಳಿ ಮಾರಮ್ಮನ ದರ್ಶನ ಪಡೆದ ಮಾಜಿ ಶಾಸಕ

ಹನೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಅವರು ಗುರುವಾರ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಈ ವೇಳೆ ಆಗಮಿಸಿದ ನೂತನ ನಿರ್ದೇಶಕರನ್ನು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು. ನೆರೆದಿದ್ದವರಿಗೆ ಸಿಹಿ ವಿತರಿಸಿದರು. ಪಟಾಕಿ ಸಿಡಿಸಿ ಜಯಘೋಷ ಮೊಳಗಿಸುವುದರ ಮೂಲಕ ಸಂಭ್ರಮಿಸಿದರು.
ಇದಕ್ಕೂ ಮುನ್ನ ಪಟ್ಟಣದ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಆರ್.ನರೇಂದ್ರ ಅವರನ್ನು ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಆರ್.ನರೇಂದ್ರ ಮಾತನಾಡಿ, ಕಳೆದ 3 ವರ್ಷದ ಅವಧಿಯಲ್ಲಿ ಶಾಸಕನಾಗಿದ್ದ ವೇಳೆ ಹಲವು ಕಾಮಗಾರಿಗಳನ್ನು ಕೈಗೊಳ್ಳುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಲ್ಲದೆ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ವೇಳೆ ಚಾ.ನಗರ ಜಿಲ್ಲೆಯ ಸಹಕಾರ ಸಂಘಗಳಿಗೆ ಹೆಚ್ಚು ಸಾಲವನ್ನು ನೀಡುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿರುವ ಬಗ್ಗೆ ತೃಪ್ತಿ ಇದೆ. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಿಲ್, ನಿರ್ದೇಶಕ ಶ್ರೀನಿವಾಸ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಪಪಂ ಸದಸ್ಯರಾದ ಹರೀಶ್‌ಕುಮಾರ್, ಗಿರೀಶ್, ಸೋಮಶೇಖರ್, ಮಹಾದೇಶ್, ಬಸವರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ಮಾದೇಶ್, ರಾಜು ಇತರರು ಇದ್ದರು.