ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ದೇವಸ್ಥಾನದ ಮುಂಭಾಗ ಶ್ರಾವಣ ಶನಿವಾರ ಪ್ರಯುಕ್ತ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಮೆರವಣಿಗೆ ಮಾಡಲಾಯಿತು.
- ಶ್ರೀ ಬಿಳಿಗಿರಿರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು
- ಉತ್ಸವಮೂರ್ತಿ ಮೆರವಣಿಗೆ
ಯಳಂದೂರು: ಶ್ರಾವಣ ಮಾಸದ ಕಡೇ ಶನಿವಾರ ತಾಲೂಕಿನ ಪ್ರಸಿದ್ಧ ವೈಷ್ಣವ ಪರಂಪರೆಯ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಮುಂಜಾನೆ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ತುಳಸಿ ಸೇರಿದಂತೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಆ ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶನಿವಾರ ಬೆಳಗ್ಗೆಯಿಂದಲೇ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಟ್ಟದ ದೇವಸ್ಥಾನ, ಕಮರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ಜತೆಗೆ ರಥದ ಬೀದಿಯಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ಕಂಡು ಬಂದಿತು. ದೇಗುಲ ಸಮೀಪ ಇರುವ ಅನ್ನ ದಾಸೋಹದಲ್ಲಿ ಸಾವಿರಾರು ಭಕ್ತರಿಗೆ ಮಧ್ಯಾಹ್ನ ಪ್ರಸಾದ ವಿನಿಯೋಗ ಮಾಡಲಾಯಿತು.
ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಘೋಷಿಸಿರುವ ಕಾರಣ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಸೇರಿದಂತೆ ಇತರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ವತಿಯಿಂದ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿತ್ತು. ಆದರೂ ಭಕ್ತರಿಂದ ಬಸ್‌ಗಳು ತುಂಬಿ ತುಳುಕುತ್ತಿದ್ದವು. ದೇವರ ದರ್ಶನ ಪಡೆದ ಭಕ್ತರು, ಗರುಡೋತ್ಸವ ಸೇರಿದಂತೆ ಇತರ ಸೇವೆಗಳನ್ನು ಮಾಡಿಸಿದರು.
ಕಡೇ ಶ್ರಾವಣ ಶನಿವಾರ ಪ್ರಯುಕ್ತ ಬಿಳಿಗಿರಿರಂಗನಾಥಸ್ವಾಮಿ ಬೆಟ್ಟಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬೆಂಬಲಿಗರು ತೆರಳಿ ದೇವರ ದರ್ಶನ ಪಡೆದುಕೊಂಡು ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಇತರ ಪೂಜಾ ಕಾರ್ಯಗಳನ್ನು ಸಲ್ಲಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸುರೇಶ್, ಸಿಬ್ಬಂದಿ ರಾಜು, ಶೇಷಾದ್ರಿ ಇತರರು ಇದ್ದರು.