ಲಯನ್ಸ್ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಉಪನ್ಯಾಸಕ ಶ್ಯಾಮ್ ಕುಮಾರ್ ಅವರ ವಿಚಾರವಾಗಿ ಲಯನ್ಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸಭೆ ನಡೆಸಿತು. 
ಚಾಮರಾಜನಗರ

ಉಪನ್ಯಾಸಕನ ವರ್ತನೆಯಿಂದ ನೋವಾಗಿದೆ

ಕೊಳ್ಳೇಗಾಲ: ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶ್ಯಾಮ್‌ಕುಮಾರ್ ಅವರನ್ನು ಕರ್ತವ್ಯದಲ್ಲಿ ಮುಂದುವರಿಸುವಂತೆ ಆಗ್ರಹಿಸಿ ಮೇ 18ರಂದು ಪಾಲಕರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಲಯನ್ಸ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಬುಧವಾರ ಸಭೆ ನಡೆಸಿತು.
ಆಡಳಿತ ಮಂಡಳಿ ಸದಸ್ಯರು, ಸಂಸ್ಥೆಯ ಬೋಧಕ ವರ್ಗ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಲಯನ್ಸ್ ಕಾಲೇಜಿನ ಪ್ರಾಂಶುಪಾಲೆ ವಿನುತಾ ಮಾತನಾಡಿ, ಉಪನ್ಯಾಸಕ ಶ್ಯಾಮ್‌ಕುಮಾರ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಮಕ್ಕಳನ್ನು ಬೇರೆ ಉಪನ್ಯಾಸಕ ವಿರುದ್ಧ ಎತ್ತಿಕಟ್ಟಿ ಮಾತನಾಡಿಸುತ್ತಿದ್ದರು. ಸಹೋದ್ಯೋಗಿಗಳು, ಆಡಳಿತ ಮಂಡಳಿ ಮೇಲೆ ಕೂಗಾಡುವುದು, ಏಕವಚನದಲ್ಲಿ ಮಾತನಾಡುವುದು ಇವೆಲ್ಲದರಿಂದ ಬಹಳ ನೋವಾಗಿದೆ. ಅವರನ್ನು ಯಾರೂ ತೆಗೆದುಹಾಕಿಲ್ಲ ಅವರೇ ರಾಜೀನಾಮೆ ನೀಡಿದ್ದಾರೆ ಎಂದರು.
ಆಡಳಿತ ಮಂಡಳಿ ನಿರ್ದೇಶಕ ಎ.ಡಿ.ಕುಮಾರಕೃಷ್ಣ ಮಾತನಾಡಿ, ಉಪನ್ಯಾಸಕ ಶ್ಯಾಮ್‌ಕುಮಾರ್ ಅವರಿಂದ ಸಹೋದ್ಯೋಗಿ ಮಹಿಳೆಯರಿಗೆ ತೊಂದರೆಯಾಗಿರುವುದನ್ನು ತಿಳಿಸುವುದು, ಹೆಣ್ಣು ಮಕ್ಕಳು ಕರ್ತವ್ಯ ನಿರ್ವಹಿಸಲಾಗದ ಪರಿಸ್ಥಿತಿ ಸನ್ನಿವೇಶ ಸೃಷ್ಟಿಯಾಗಿದೆ. ಎರಡು ದಿನದ ಹಿಂದೆ ನಡೆದ ಸಭೆಯಲ್ಲಿ ಪಾಲಕರು ಶ್ಯಾಮ್ ಮೇಲೆ ದೂರಿರುವ ಸಿಬ್ಬಂದಿಯನ್ನು ಕರೆಸುವಂತೆ ಹಾಗೆ ಶ್ಯಾಮ್ ಅವರನ್ನು ಕರೆಸುವಂತೆ ಬೇಡಿಕೆ ಇಟ್ಟಿದ್ದರು. ಪ್ರಾಂಶುಪಾಲರು ಶ್ಯಾಮ್ ಅವರನ್ನು ಸಭೆಗೆ ಕರೆದಿದ್ದರೂ ಬಂದಿಲ್ಲ. ಅವರನ್ನು ಕರ್ತವ್ಯದಲ್ಲಿ ಉಳಿಸಬೇಕೆಂದು ಒತ್ತಾಯಿಸಿದ್ದ ಪಾಲಕರೂ ಗೈರಾಗಿದ್ದಾರೆ ಎಂದರು.
ಶ್ಯಾಮ್ ಅವರಿಂದ ಮಾನಸಿಕ ನೋವಿಗೆ ಒಳಗಾಗಿರುವ ಬಗ್ಗೆ ಮಹಿಳಾ ಸಿಬ್ಬಂದಿ ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಅಗತ್ಯವಿದ್ದರೆ ಅವರು ಬಳಸಿರುವ ಅವಾಚ್ಯ ಶಬ್ದಗಳನ್ನು ಹೇಳಬೇಕಾದರೆ ಮಹಿಳಾ ನ್ಯಾಯಾಧೀಶರು, ಮಹಿಳಾ ಪೊಲೀಸರ ಬಳಿ ಹೇಳುತ್ತೇವೆ ಎಂದು ಹೇಳುತ್ತಿದ್ದಾರೆ. ಶ್ಯಾಮ್ ಅವರ ವಿಚಾರದಲ್ಲಿ ಸಂಸ್ಥೆ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧವಾಗಿದೆ. ಸಂಸ್ಥೆ ನಿರ್ಧಾರಕ್ಕೆ ನಾಗರಿಕರು ಬೆಂಬಲ ನೀಡಿದ್ದಾರೆ ಎಂದರು.
ಸಭೆ ಅಂತ್ಯದಲ್ಲಿ ಶ್ಯಾಮ್‌ಕುಮಾರ್ ಪರವಾಗಿ ಪ್ರತಿಭಟಿಸಿದ್ದ ಚೇತನ್ ಸಭೆಗೆ ಬಂದಾಗ ಸ್ಥಳದಲ್ಲಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹೋರಾಟಗಾರ್ತಿ ಶೋಭಾ, ಅಣಗಳ್ಳಿ ಬಸವರಾಜು ಮಾತನಾಡಿದರು.
ಲಯನ್ಸ್ ವಿದ್ಯಾಸಂಸ್ಥೆ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ನಾಗರಾಜು, ಲಯನ್ಸ್ ಸಂಸ್ಥೆ ಅಧ್ಯಕ್ಷ ಮಾದೇಶ್, ನಿರ್ದೇಶಕರಾದ ವೆಂಕಟೇಶ್‌ಬಾಬು, ಜಿಎಸ್‌ಎಂ ಪ್ರಸಾದ್, ಚನ್ನಮಾದೇಗೌಡ, ರಾಮಯ್ಯ, ವಿಶ್ವನಾಥ್, ಜಯಪ್ರಕಾಶ್, ಆಡಳಿತ ಮಂಡಳಿ ಸದಸ್ಯರು, ನಾಗರಿಕರ ಹಿತರಕ್ಷಣಾ ಸಮಿತಿಯ ನಟರಾಜ್ ಮಾಳಿಗೆ, ರೈತ ಮುಖಂಡ ಅಣಗಳ್ಳಿ ಬಸವರಾಜು, ದಿಲೀಪ್ ಸಿದ್ದಪ್ಪಾಜಿ, ಎಸ್.ಸಿದ್ದಪ್ಪಾಜಿ, ತೇಜ, ಸಂಜಯ್, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಕಾವುಲ್ಲಾ ಇತರರು ಇದ್ದರು.