ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ ಜೋರು
- ಎಳ್ಳು-ಬೆಲ್ಲ, ಪೂಜಾ ಸಾಮಗ್ರಿಗಳ ಖರೀದಿ
- ಹಬ್ಬದ ಮುನ್ನಾದಿನ ಕಟ್ಟುಕೋಳು ಆಚರಣೆ
- ನಗರದಲ್ಲಿ ವ್ಯಾಪಾರ ಜೋರು
ಚಾಮರಾಜನಗರ: ನಾಡಿನ ರೈತಾಪಿ ವರ್ಗ ಸುಗ್ಗಿ ಕಾಲದಲ್ಲಿ ಆಚರಿಸುವ ಮಕರ ಸಂಕ್ರಾಂತಿ ಹಬ್ಬದ ಆಚರಣೆಯ ಅಂಗವಾಗಿ ಜಿಲ್ಲೆಯಾದ್ಯಂತ ಖರೀದಿ ಭರಾಟೆ ಜೋರಾಗಿತ್ತು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಕ್ರಾಂತಿ ಹಬ್ಬವಾಗಿ ಜನರು ಮಾರುಕಟ್ಟೆಗಳಿಗೆ ತೆರಳಿ ಎಳ್ಳು, ಬೆಲ್ಲ, ವಿವಿಧ ಬಗೆಯ ಸಿಹಿ ತಿಂಡಿಗಳು ಹಾಗೂ ಕಬ್ಬನ್ನು ಖರೀದಿ ಮಾಡಿದರು. ಮನೆಯ ಅಲಂಕಾರಿಕ ವಸ್ತುಗಳ ಜತೆಗೆ ವಿವಿಧ ಪೂಜಾ ಸಾಮಗ್ರಿಗಳನ್ನು ಕೊಂಡುಕೊಂಡರು. ಹಣ್ಣು, ತರಕಾರಿ ಹಾಗೂ ವಿವಿಧ ಬಗೆಯ ಹೂವುಗಳನ್ನು ಖರೀದಿ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಅಂಗಡಿ-ಮುಂಗಟ್ಟುಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಜನಸಂಧಣಿ ಕಂಡುಬಂದಿತು. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳನ್ನು ಸಿಂಗಾರ ಮಾಡುವುದರಿಂದ ವಿವಿಧ ಬಗೆಯ ಅಲಂಕಾರಿಕ ವಸ್ತುಗಳನ್ನು ಜನರು ಕೊಂಡುಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಹಳೆ ಮಾರುಕಟ್ಟೆ ಮತ್ತು ಹೊಸ ಮಾರುಕಟ್ಟೆ ರಸ್ತೆ, ಮಾರುಗುಡಿ ಮುಂಭಾಗದ ರಸ್ತೆಯಲ್ಲಿ ವ್ಯಾಪಾರ-ವಹಿವಾಟು ಜೋರಾಗಿ ನಡೆಯಿತು. ಹಬ್ಬದ ಅಂಗವಾಗಿ ಕುಟುಂಬ ಸಮೇತರಾಗಿ ಜನರು ಬಂದು ಹೊಸಬಟ್ಟೆಗಳನ್ನು ಖರೀದಿ ಮಾಡಿದರು. ಹಲವಾರು ಅಂಗಡಿ ಮುಂಗಟ್ಟುಗಳು ಜನರಿಂದ ಗಿಜುಗುಡುತ್ತಿತ್ತು. ಕೆಲವು ರಸ್ತೆಗಳಲ್ಲಿ ಜನ ಮತ್ತು ವಾಹನ ಸಂದಣಿ ಹೆಚ್ಚಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ವಿವಿಧ ಅಂಗಡಿಗಳಲ್ಲಿ ಎಳ್ಳು-ಬೆಲ್ಲ ಹಾಗೂ ವಿವಿಧ ಸಿಹಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಹೂವು, ಹಣ್ಣು ಮತ್ತು ಇನ್ನಿತರೆ ವಸ್ತುಗಳ ಬೆಲೆ ಹೆಚ್ಚಾಗಿದ್ದರಿಂದ ಹಬ್ಬದ ಸಂಭ್ರಮದ ನಡುವೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯೂ ತಟ್ಟಿತು.
ಸಂಕ್ರಾಂತಿ ಅಂಗವಾಗಿ ಗ್ರಾಮೀಣ ಭಾಗದಲ್ಲಿ ಹಬ್ಬದ ಮುನ್ನಾ ದಿನ ಕಟ್ಟುಕೋಳು ಆಚರಣೆ ಮಾಡಿಕೊಂಡು ಬರುತ್ತಿದ್ದು, ಅದರಂತೆ ಕೃಷಿ ಸಂಗಾತಿ ಹಸು, ದನ, ಕರುಗಳು ಹಾಗೂ ವಿವಿಧ ಪ್ರಾಣಿಗಳು ಹಾಗೂ ಕೃಷಿ ಪರಿಕರಗಳನ್ನು ಸಿಂಗಾರ ಮಾಡಲಾಗುತ್ತಿತ್ತು. ರೈತರು ತಮ್ಮ ಮನೆಯ ಸಮೀಪ ಮತ್ತು ಜಮೀನುಗಳಲ್ಲಿ ಇರುವ ತೆಂಗಿನ ಮರಗಳಿಗೆ ಸುಣ್ಣ, ಕೆಮ್ಮಣ್ಣು ಬಳಿದು ಸಿಂಗಾರ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.