ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಸೋಮವಾರ ಶ್ರೀ ಮೀನಾಕ್ಷಿ ಸಮೇತ ಸೋಮೇಶ್ವರ ಬ್ರಹ್ಮರಥೋತ್ಸವ ಶ್ರದ್ಧಾ-ಭಕ್ತಿಯಿಂದ ನೆರವೇರಿತು. 
ಚಾಮರಾಜನಗರ

ಶಿವನಸಮುದ್ರ ಗ್ರಾಮದಲ್ಲಿ ಸೋಮೇಶ್ವರ ಬ್ರಹ್ಮರಥೋತ್ಸವ

ಎ. ಆರ್. ರಘುರಾಮ
ಕೊಳ್ಳೇಗಾಲ : ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಸೋಮವಾರ ಶ್ರೀ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಶಿವನಸಮುದ್ರದ ಸಮೂಹ ದೇವಾಲಯಕ್ಕೆ ಸೇರಿದ ಶ್ರೀ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮುಂಜಾನೆ ಶಿವಯಾಗ, ಬಲಿ ಪ್ರದಾನ, ರಥ ಪ್ರತಿಷ್ಠೆ, ಯಾತ್ರಾ ದಾನೋತ್ಸವ ಹಾಗೂ ಮಂಟಪೋತ್ಸವ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ದೇವಾಲಯ ಮುಂಭಾಗದಲ್ಲಿ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಮೀನಾಕ್ಷಿ ಸಮೇತ ಶ್ರೀ ಸೋಮೇಶ್ವರ ಉತ್ಸವ ಮೂರ್ತಿಯನ್ನು ಪೂಜೆ ಸಲ್ಲಿಸಲಾಯಿತು. ಬಳಿಕ ರಥೋತ್ಸವ ರಾಜ ಬೀದಿಗಳಲ್ಲಿ ಸಾಗಿತು. ಮನೆ ಮುಂಭಾಗ ಆಗಮಿಸಿದ ರಥೋತ್ಸವಕ್ಕೆ ಭಕ್ತರು ಕೈ ಮುಗಿದು ಹೂವು, ಹಣ್ಣು, ಕಾಯಿ ಸಮರ್ಪಿಸಿದರು. ದೇವಾಲಯದ ಎಲ್ಲ ಪೂಜಾ ಕಾರ್ಯವನ್ನು ಪ್ರಧಾನ ಆಗಮಿಕ ಡಾ.ನಾಗರಾಜು ದೀಕ್ಷಿತ್, ಸ್ಕಂದ ಕುಮಾರ್ ದೀಕ್ಷಿತ್ ನೆರವೇರಿಸಿದರು. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್‌ಠಾಣೆ ವತಿಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಶಿವನಸಮುದ್ರ ಸಮೂಹ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಮುಖಂಡ ರವಿಶಂಕರ್ ಹ್ಯಾಂಡ್‌ಪೋಸ್ಟ್ ಹಾಗೂ ಗ್ರಾಮದ ಮುಖಂಡರು, ಭಕ್ತರು ಇದ್ದರು.