ಪ್ರಮುಖ ಮುಖ್ಯಾಂಶಗಳು
ಯಳಂದೂರು :
ಜನಪದ ಕಲೆಗಳ ತವರೂರು, ಸಾಂಸ್ಕೃತಿಕ ಹಿರಿಮೆಯ ನಾಡು ಯಳಂದೂರಿನಲ್ಲಿ ನೆಲೆಯೂರಿರುವ ಶಿವಕವಿ ಷಡಕ್ಷರ ದೇವ ಲಕ್ಷಾಂತರ ಭಕ್ತರ ಆರಾಧ್ಯ ದೈವರಾಗಿದ್ದಾರೆ. ಜತೆಗೆ ಅವರ ಗದ್ದುಗೆ ಆಧ್ಯಾತ್ಮಿಕ ತಾಣವಾಗಿ ಮಾರ್ಪಟ್ಟಿದೆ.
ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದವರಾದ ಷಡಕ್ಷರದೇವ ಕ್ರಿ.ಶ ಸುಮಾರು 1655ರಲ್ಲಿ ಜೀವಿಸಿದ್ದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದಲ್ಲಿ ಪಟ್ಟದ ಮಠದ ಪಟ್ಟಾಧಿಕಾರಿಯಾಗಿ ಕಾಲ ಕಳೆದಿದ್ದರು. ಆನಂತರ ಅಂದಿನ ಕಾಲದಲ್ಲಿ ವಿದ್ಯಾಭ್ಯಾಸದ ಕೇಂದ್ರವಾಗಿದ್ದ ಯಳಂದೂರು ಪಟ್ಟಣಕ್ಕೆ ಆಗಮಿಸಿ ಷಡಕ್ಷರದೇವ ಚಿಕ್ಕವೀರದೇಶಿಕ ಎಂಬ ಗುರುಗಳಿಂದ ಶಿಕ್ಷಣ ಪಡೆದು ಮುಂದೆ ಇಲ್ಲಿಯೇ ನೆಲೆಸಿ, ರಾಜಶೇಖರ ವಿಳಾಸ, ಬಸವರಾಜ ವಿಜಯ, ಶಬರಶಂಕರ ವಿಳಾಸ ಎಂಬ ಮೂರು ಚಂಪೂ ಕೃತಿಗಳನ್ನು ಬರೆದಿದ್ದಲ್ಲದೆ, ಕವಿ ಕರ್ಣರ ಸಾಯನಮ್, ಶಿವಾಧಿಕ್ಯ ರತ್ನಾವಳಿ, ಭಕ್ತಾಧಿಕ್ಯ ರತ್ನಾವಳಿ, ಶಿವಸ್ತವ ಮಂಜರಿ, ವೀರಭದ್ರೋದಾಹರಣಂಗದ್ಯಂ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಷಡಕ್ಷರ ದೇವರ ಗದ್ದುಗೆಯನ್ನು 1975ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ಅಂದಿನ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಉದ್ಘಾಟನೆ ಮಾಡಿದ್ದರು. ಇಲ್ಲಿ ಮಹಾಕವಿ ಷಡಕ್ಷರ ದೇವರ ಗದ್ದುಗೆ ಇದ್ದು, ದೇವರ ರೀತಿಯಲ್ಲೇ ಭಕ್ತರು ಪೂಜೆ ಮಾಡುತ್ತಿದ್ದಾರೆ.
ಷಡಕ್ಷರ ದೇವ ದೇವಾಲಯದಲ್ಲಿ ಸೋಮವಾರ ಹಾಗೂ ಶುಕ್ರವಾರ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪ್ರತಿ ಅಮಾವಾಸ್ಯೆ ಹಾಗೂ ಶಿವರಾತ್ರಿ ವೇಳೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಕ್ತಿಯ ಜತೆ ಜ್ಞಾನಾರ್ಜನೆಗೂ ದೇವಾಲಯ ಪ್ರಸಿದ್ಧಿ ಪಡೆದಿದೆ. ತಾಲೂಕಿನ ವಿವಿಧ ಭಾಗಗಳಿಂದ ಜನರು ಆಗಮಿಸಿ ಷಡಕ್ಷರ ದೇವರ ಮಹಿಮೆ ಅರಿತುಕೊಂಡಿದ್ದಾರೆ. ಹೊರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಷಡಕ್ಷರ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಕನ್ನಡ ಸಾಹಿತ್ಯದ ಇತಿಹಾಸವನ್ನು ನೆನಪಿಸುವ ಗುಡಿಯೂ ಆಗಿದೆ. ಮಹಾಕವಿ ಷಡಕ್ಷರ ದೇವ ಅವರ ಸಾಹಿತ್ಯ, ಅವರ ಆಧ್ಯಾತ್ಮಿಕ ಜೀವನ ಮತ್ತು ಕನ್ನಡದ ಮೇಲಿನ ಅವರ ಅಪಾರ ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕೇಂದ್ರವಾಗಿ ಇದು ಬೆಳೆಯುತ್ತಿದೆ. ಯಳಂದೂರಿನ ಗೌರೀಶ್ವರ ದೇವಾಲಯ, ಪಂಚಲಿಂಗ ಸಂಕೀರ್ಣ ಹಾಗೂ ಇತರ ಐತಿಹಾಸಿಕ ತಾಣಗಳ ಜತೆಗೆ ಷಡಕ್ಷರ ದೇವ ಗದ್ದುಗೆಯೂ ಪ್ರಮುಖ ಆಕರ್ಷಣೆಯಾಗಿದೆ.