ಯಳಂದೂರು ಪಟ್ಟಣದ ಬಳೇಪೇಟೆಯಲ್ಲಿರುವ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಆಯೋಜಿಸಿದ್ದ ಗಂಧೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಭಾಗವಹಿಸಿದ್ದರು.
- ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ
- ಗಂಧೋತ್ಸವ ಕಾರ್ಯಕ್ರಮ
ಯಳಂದೂರು: ಪಟ್ಟಣದಲ್ಲಿ ಆರಂಭಗೊಂಡಿರುವ ಶಾದಿ ಮಹಲ್ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಕೆಆರ್‌ಐಡಿಎಲ್‌ನ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಬಳೇಪೇಟೆಯಲ್ಲಿರುವ ಹಜರತ್ ಮುರ್ತುಜಾ ಶಾ ಖಾದ್ರಿ ದರ್ಗಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಂಧೋತ್ಸವ (ಉರುಸ್)ದಲ್ಲಿ ಮಾತನಾಡಿದರು.
ಶಾದಿ ಮಹಲ್ ನಿರ್ಮಾಣಕ್ಕೆ 50 ಲಕ್ಷ ರೂ.ಅನುದಾನ ನೀಡಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿದೆ. ಇದಕ್ಕೆ ಇನ್ನಷ್ಟು ವೇಗ ನೀಡಲಾಗುವುದು. ಕೊಳ್ಳೇಗಾಲದ ಶಾದಿ ಮಹಲ್‌ಗೂ 1 ಕೋಟಿ ರೂ. ಅನುದಾನ ನೀಡಲಾಗಿದ್ದು, ಈ ಕಾಮಗಾರಿಯೂ ಬಹುತೇಕ ಮುಗಿದಿದೆ ಎಂದು ಮಾಹಿತಿ ನೀಡಿದರು. ನನ್ನ ಅವಧಿಯಲ್ಲಿ ಎಲ್ಲ ಜನಾಂಗ, ಧರ್ಮಗಳ ಸಮುದಾಯ ಭವನಗಳಿಗೂ ಅನುದಾನ ನೀಡಲಾಗಿದೆ ಎಂದರು.
ಸಂಭ್ರಮದ ಉರುಸ್: ಪಟ್ಟಣದ ಬಳೇಪೇಟೆಯ ಸುವರ್ಣಾವತಿ ನದಿ ದಡದಲ್ಲಿರುವ ಹಜರತ್ ಮುರ್ತುಜಾ ಷಾ ಖಾದ್ರಿ ದರ್ಗಾದಲ್ಲಿ ಮಂಗಳವಾರ ಸಂಭ್ರಮ ಸಡಗರಗಳಿಂದ ಉರುಸ್(ಗಂಧೋತ್ಸವ) ನಡೆಯಿತು.
ಇದಕ್ಕಾಗಿ ದರ್ಗಾವನ್ನು ವಿಶೇಷ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಜೆ 5.30ಕ್ಕೆ ಪಟ್ಟಣದ ಜಾಮೀಯಾ ಮಸೀದಿಯಿಂದ ದೇವರ ನಾಮ ಹಾಡುವ ಫಕೀರರ ತಂಡ ಹಾಗೂ ನೃತ್ಯತಂಡಗಳು ದೇವರ ನಾಮಗಳನ್ನು ಹಾಡಿಕೊಂಡು ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ, ಸುವರ್ಣಾವತಿ ಸೇತುವೆ, ಬಳೇಪೇಟೆಯಲ್ಲಿ ಮೆರವಣಿಗೆ ಮೂಲಕ ಗಂಧದ ಬಿಂದಿಗೆಯನ್ನು ದರ್ಗಾಕ್ಕೆ ತರಲಾಯಿತು. ರಾತ್ರಿ 7.30ಕ್ಕೆ ವಿಶೇಷ ದುವಾ (ಪ್ರಾರ್ಥನೆ) ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಲಾಯಿತು. ನಂತರ ನಡೆದ ಖವ್ವಾಲಿ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು.
ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದುವ ವಿಶೇಷ ದುವಾ ಸಲ್ಲಿಸಿದರು.
ಹಿಂದು ಭಕ್ತರು ಭಾಗಿ: ಈ ದರ್ಗಾದಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳು ಆರಂಭಕ್ಕೂ ಮುಂಚೆ ಗಂಧೋತ್ಸವ ನಡೆಯುವ ವಾಡಿಕೆ ಇದೆ. ಇಲ್ಲಿಗೆ ಮುಸ್ಲಿಮರು ಮಾತ್ರವಲ್ಲದೆ ಹಿಂದೂ ಭಕ್ತರೂ ಸಹ ಪಾಲ್ಗೊಳ್ಳುವುದು ವಿಶೇಷವಾಗಿದೆ. ಹರಕೆ ಹೊತ್ತು ಬರುವ ಅನೇಕ ಹಿಂದು ಭಕ್ತರು ಪ್ರಾರ್ಥಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಾಣ ಸಿಕ್ಕಿತು. ನೆರೆದಿದ್ದ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಮುಸ್ಲಿಂ ಮುಖಂಡರಾದ ನಯಾಜ್ ಖಾನ್, ಪಪಂ ಮಾಜಿ ಸದಸ್ಯ ಮಹೇಶ್, ನಾಮ ನಿರ್ದೇಶಿತ ಸದಸ್ಯ ಪಿ.ಸಿ.ಶ್ರೀಕಂಠಸ್ವಾಮಿ, ಮುಖಂಡ ನಿಂಗರಾಜು ಇತರರು ಇದ್ದರು.