ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ದೊಡ್ಡಕೆರೆಗೆ ಚರಂಡಿ ನೀರು ಸೇರಿಕೊಂಡು ಕಲುಷಿತವಾಗಿರುವುದು 
ಚಾಮರಾಜನಗರ

ಕೆರೆಯ ಒಡಲಿಗೆ ಕೊಳಚೆ ನೀರು

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಾಗವಳ್ಳಿಯ ದೊಡ್ಡ ಕೆರೆಗೆ ಗ್ರಾಮದ ಚರಂಡಿ ಗಲೀಜು
  • ಕೊಳಚೆ ತಡೆಯದೆ ನೆಲದ ಜಲದ ಜೀವದ ಅಸ್ವಿತ್ವಕ್ಕೆ ಧಕ್ಕೆ
ಚಾಮರಾಜನಗರ: ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಪುರಂದರ ದಾಸರ ಕೀರ್ತನೆಯ ದಾನವಂತಿಕೆ ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕೆರೆಯ ನೀರಿಗೆ ಕೊಳಚೆ ಚೆಲ್ಲುತ್ತಿರುವುದಕ್ಕೂ ಅಡ್ಡಿ ಇಲ್ಲದಂತಾಗಿದೆ.
ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಮಳೆ ಮತ್ತು ಸುವರ್ಣಾವತಿ ಜಲಾಶಯದ ನೀರನ್ನೇ ಮೂಲಧಾರವಾಗಿಸಿಕೊಂಡಿರುವ ದೊಡ್ಡಕೆರೆ ಮತ್ತು ಚಿಕ್ಕಕೆರೆಗಳಿಗೆ ಚರಂಡಿ ನೀರು ಹರಿಸಿ ಜೀವಜಲದ ಜೀವವನ್ನೇ ಹಿಂಡಲಾಗುತ್ತಿದೆ. ಊರಿನ ರಸ್ತೆಯ ಅಕ್ಕ-ಪಕ್ಕದಲ್ಲಿ ಅವಳಿ ಮಕ್ಕಳಂತೆ ಇರುವ ಎರಡು ಕೆರೆಗಳು ದೂರದಿಂದ ನೋಡಲು ಬಲು ಸುಂದರ. ಆದರೆ ಹತ್ತಿರಕ್ಕೆ ಹೋಗಿ ಗಮನಿಸಿದರೆ ಕೆರೆಯ ಒಂದು ತುದಿಯಿಂದ ಊರಿನ ಕೊಳಚೆ ನೀರೆಲ್ಲವೂ ಸೇರಿಕೊಂಡು ಕುರೂಪಿಯಾಗಿದೆ. ಕೆರೆಯ ನೀರಿಗೆ ಕೊಳಚೆ ಚೆಲ್ಲಿ ನೆಲದ ಜಲದ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ.
ಹಲವು ವರ್ಷಗಳಿಂದಲೂ ಗ್ರಾಮದ ಕೆರೆಗಳಿಗೆ ಊರಿನ ಅರ್ಧ ಚರಂಡಿ ನೀರು ಬಂದು ಸೇರಿಕೊಳ್ಳುತ್ತಿದೆ. ಇದನ್ನು ತಡೆದು ಕೆರೆಯ ನೈರ್ಮಲ್ಯ ಕಾಪಾಡಬೇಕಾದವರೂ ಸಹ ಒಳಗೆ ಸೇರಿಕೊಂಡುಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲೂ ಹೊರಗೆ ಬಂದು ಕೊಳಚೆ ನೀರು ಕೆರೆಗೆ ಸೇರಿಕೊಳ್ಳುವುದನ್ನು ತಡೆಯಲು ಆಗುವುದಿಲ್ಲ ಎನ್ನುವಷ್ಟು ಅಪನಂಬಿಕೆಯನ್ನು ಹುಟ್ಟಿಸಿಬಿಟ್ಟಿದ್ದಾರೆ. ಕೆರೆ ಗಬ್ಬು ನಾರುತ್ತಿರುವಷ್ಟೇ ಅವರ ಕರ್ತವ್ಯವೂ ಗಬ್ಬೆದ್ದು ನಾರುತ್ತಿದೆ. ಹಾಗಾಗಿ ನಾಗವಳ್ಳಿಯ ಕೆರೆಗಳು ಕೊಳಚೆ ನೀರಿನ ಸೆಲೆಗಳಾಗಿ
ಬದಲಾಗುವ ಕಾಲ ದೂರವಿಲ್ಲ.
ಏನೂ ಪ್ರಯೋಜವಾಗಿಲ್ಲ: ಸಂಸದ ಸುನೀಲ್‌ಬೋಸ್ 2025ರ ಜೂ.25ರಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಪತ್ರ ಬರೆದು, ನಾಗವಳ್ಳಿ ಗ್ರಾಮದ ಚರಂಡಿ ನೀರು ದೊಡ್ಡಕೆರೆಗೆ ಸೇರುತ್ತಿದೆ. ಕೆರೆಯ ಪರಿಸರ ಭಾಗಶಃ ಹಾಳಾಗುತ್ತಿದೆ. ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದು, ಈ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಬಳಿಕ 2025 ನ.17ರಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪತ್ರ ಬರೆದು ನಾಗವಳ್ಳಿ ಗ್ರಾಮದಲ್ಲಿ ಚರಂಡಿ ನೀರು ಕೆರೆಗೆ ಹೋಗುತ್ತಿರುವುದನ್ನು ತಡೆದು ಚರಂಡಿ ನಿರ್ಮಾಣ ಮಾಡಲು 39 ಲಕ್ಷ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಕೆ ಮಾಡಿದ್ದರು. ಆದರೆ ಇದಾದ ಇಷ್ಟು ದಿನಗಳೇ ಕಳೆಯುತ್ತಿದ್ದರೂ ಚರಂಡಿ ನಿರ್ಮಾಣ ಮಾಡಿ ಕೊಳಚೆ ನೀರು ಕೆರೆಗೆ ಸೇರದಂತೆ ಮಾಡುವ ಕಾರ್ಯ ಶುರುವಾಗಿಲ್ಲ. ಪ್ರತಿದಿನ ಊರಿನ ಕೊಳಚೆ ನೀರು ಕೆರೆಗೆ ಸೇರಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿಯಿಂದ ಬೂದು ನೀರು ನಿರ್ವಹಣೆಯ ಕಾಮಗಾರಿಯನ್ನು ಯಾವ ಸ್ಥಳದಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಕೊನೆ ಪಕ್ಷ ಕೆರೆಯ ಮಾಲಿನ್ಯ ತಪ್ಪಿಸಲು ಇಲ್ಲಾದರೂ ಕಾಮಗಾರಿ ಮಾಡಬಹುದಿತ್ತು ಎನ್ನುವ ಯೋಚನೆಯನ್ನು ಕೈಗೊಂಡಿಲ್ಲ.
ಚಿಕ್ಕ ಕೆರೆ ಹೂಳು ತೆರವು:
ನಾಗವಳ್ಳಿ ಗ್ರಾಮದ ದೊಡ್ಡಕೆರೆಗೆ ಚರಂಡಿ ನೀರು ಸೇರಿಕೊಂಡು ಕಲುಷಿತವಾಗುತ್ತಿದ್ದಾರೆ ಪಕ್ಕದಲ್ಲೇ ಇರುವ ಚಿಕ್ಕಕೆರೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರಮದ ಲವಾಗಿ ಹೂಳು ತೆರವುಗೊಂಡಿದೆ. ಕೆರೆಯ ಹೂಳು ತೆಗೆಯಬೇಕೆಂದು ಗ್ರಾಮಸ್ಥರು ಯೋಜನೆಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳು ತೆಗೆಯಲಾಗಿದೆ. ಇದಕ್ಕಾಗಿ ಕೆರೆ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿಕೊಳ್ಳಲಾಗಿದೆ. ಹೂಳು ತೆಗೆದ ಮಣ್ಣನ್ನು ರೈತರ ಜಮೀನಿಗೆ ಹಾಕಿಕೊಳ್ಳಲಾಗಿದೆ. ಸುಮಾರು 8 ಎಕರೆಯ ಕೆರೆಯ ಹೂಳು ತೆಗೆದಿರುವುದರಿಂದ ನೀರಿನ ಸಂಗ್ರಹ ಹೆಚ್ಚಾಗಲಿದೆ. ಸುತ್ತಮುತ್ತಲಿನ ಪ್ರದೇಶದ ಅಂತರ್ಜಲವೂ ವೃದ್ಧಿಯಾಗಲಿದೆ. ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಸುಪ್ರಿತ್ ಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೆರೆ ಮಲಿನವಾಗುವ ಆತಂಕ:
ಹೂಳು ತೆಗೆದಿರುವ ಚಿಕ್ಕಕೆರೆಯೂ ಮಲಿನಗೊಳ್ಳುವ ಆತಂಕವನ್ನು ಗ್ರಾಮಸ್ಥ ಸುಂದರ್ ವ್ಯಕ್ತಪಡಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮವಹಿಸಿ ಚಿಕ್ಕ ಕೆರೆಯ ಹೂಳು ತೆಗೆಸಿದೆ. ಆದರೆ ಜೋರು ಮಳೆ ಸುರಿದರೆ ದೊಡ್ಡಕೆರೆಯಲ್ಲಿ ತುಂಬಿಕೊಂಡಿರುವ ಚರಂಡಿ ನೀರು ಚಿಕ್ಕ ಕೆರೆಗೂ ಬರುತ್ತದೆ. ಇದನ್ನು ತಪ್ಪಿಸಬೇಕೆಂದು ಒತ್ತಾಯ ಮಾಡಿದ್ದಾರೆ.
"

ನಮ್ಮೂರಿನಲ್ಲಿ ದೇವರ ಕಾರ್ಯಗಳು ಮತ್ತು ಮದುವೆ, ಶುಭ ಸಮಾರಂಭಗಳು ನಡೆದಾಗ ಕೆರೆಯಿಂದ ನೀರು ತಂದು ಪೂಜೆಗೆ ಬಳಸುತ್ತಿದ್ದೆವು. ಕೆರೆಗೆ ಚರಂಡಿ ನೀರು ಹರಿಸಿ, ದಿನಗಳು ಕಳೆಯುತ್ತಿದ್ದರೂ ಕೊಳಚೆ ನೀರು ಹರಿಯುವುದನ್ನು ತಡೆಯದೆ ನಮ್ಮ ಜಲಮೂಲಕ್ಕೆ ಧಕ್ಕೆ ಮಾಡುತ್ತಿರುವದಷ್ಟೇ ಅಲ್ಲದೆ, ನಮ್ಮ ಧಾರ್ಮಿಕ ಭಾವನೆಗೂ ಅಘಾತ ಉಂಟು ಮಾಡಲಾಗುತ್ತಿದೆ.ಕೆರೆಗೆ ಚರಂಡಿ ನೀರು ಬರುವುದನ್ನು ತಪ್ಪಿಸಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ.— ಬಂಗಾರು ನಾಯಕ, ಸಮುದಾಯದ ಯಜಮಾನ, ನಾಗವಳ್ಳಿ, ಚಾಮರಾಜನಗರ



"

ದೊಡ್ಡಕೆರೆಗೆ ಚರಂಡಿ ನೀರು ಸೇರುವುದನ್ನು ತಡೆಯಲು ಚರಂಡಿ ಕಾಮಗಾರಿ ಮಾಡಲು 39 ಲಕ್ಷ ರೂ. ಅಂದಾಜು ಪಟ್ಟಿ ತಯಾರಾಗಿದೆ. ಕಾಮಗಾರಿ ಶುರು ಮಾಡಲು ಈ ಅನುದಾನ ಬಿಡುಗಡೆಯಾಗುವುದನ್ನೇ ಕಾಯಲಾಗುತ್ತಿದೆ.

— ಭಾಸ್ಕರ್, ಪಿಡಿಒ, ನಾಗವಳ್ಳಿ ಗ್ರಾಮ ಪಂಚಾಯಿತಿ, ಚಾಮರಾಜನಗರ


"

ನಾಗವಳ್ಳಿ ಗ್ರಾಮದ ಕೆರೆಗಳು ಸುವರ್ಣಾವತಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಕೆರೆಗಳಿಗೆ ಚರಂಡಿ ನೀರು ಸೇರುತ್ತಿರುವದನ್ನು ತಡೆಯುವ ಕುರಿತು ಪರಿಶೀಲಿಸಿ ಕ್ರಮವಹಿಸಲಾಗುವುದು.

— ಪಿ.ಮರಿಸ್ವಾಮಿ, ಕಾಡಾ ಅಧ್ಯಕ್ಷ, ಚಾಮರಾಜನಗರ