ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಚನ್ನಂಜಯ್ಯನಹುಂಡಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದು.
- ಅವೈಜ್ಞಾನಿಕ ಕಾಮಗಾರಿ
- ಚಿಕ್ಕತುಪ್ಪೂರು ಗ್ರಾಮ
- ಜನರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ
ಗುಂಡ್ಲುಪೇಟೆ: ಅವೈಜ್ಞಾನಿಕ ಕಾಮಗಾರಿಯಿಂದ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂದು ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಜನರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಎಲ್ಲ ಚರಂಡಿಗಳ ನೀರು ಹೊರಗೆ ಹರಿದುಹೋಗುತ್ತಿದ್ದ ಹಳ್ಳಕ್ಕೆ ಮೂರು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾಲುವೆಯಿಂದಾಗಿ ಕೊಳಚೆ ನೀರು ಸಮರ್ಪಕವಾಗಿ ಹರಿದುಹೋಗುತ್ತಿಲ್ಲ. ಬದಲಾಗಿ ರಸ್ತೆ ಮೇಲೆಯೇ ಹರಿಯುತ್ತಿದೆ. ಇದರಿಂದ ಚಿಕ್ಕತುಪ್ಪೂರು-ಚನ್ನಂಜಯ್ಯನಹುಂಡಿ ಮಾರ್ಗವಾಗಿ ಸಂಚರಿಸುವ ಬೈಕ್ ಸವಾರರು ಕೊಳಚೆ ನೀರಿನಲ್ಲಿ ಹಾದುಹೋಗುವಂತಾಗಿದ್ದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರತಿ ಬಾರಿಯೂ ಬನ್ನಿತಾಳಪುರ ಗ್ರಾಮ ಪಂಚಾಯಿತಿಯವರು ಪೌರ ಕಾರ್ಮಿಕರ ನೆರವಿನಿಂದ ಚರಂಡಿಯಲ್ಲಿ ಮುಚ್ಚಿಕೊಂಡಿರುವ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಅನ್ನು ತೆರವುಗೊಳಿಸುತ್ತಿದ್ದರೂ ಕೆಲವೇ ದಿನಗಳಲ್ಲಿ ಮುಚ್ಚಿಕೊಳ್ಳುತ್ತಿದೆ. ಈ ಬಗ್ಗೆ ಹಲವಾರು ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ತಾಯಮ್ಮಣ್ಣಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟವರು ಗ್ರಾಮದ ಕೊಳಚೆ ನೀರು ರಸ್ತೆಗೆ ಬರದಂತೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.