ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ಅಂತರ್ಜಲ ಕೊರತೆಯಿಂದ ಬಾಳೆ ಹಾಗೂ ತೆಂಗಿನ ಬೆಳೆ ನಾಶವಾಗಿರುವುದು.
- ಗುಂಡ್ಲುಪೇಟೆ ತಾಲೂಕಿನಲ್ಲಿ ಅಂತರ್ಜಲ ಕೊರತೆ
- ಸಂಕಷ್ಟದಲ್ಲಿ ರೈತಾಪಿ ವರ್ಗ
ಗುಂಡ್ಲುಪೇಟೆ: ಕಳೆದ ಬಾರಿ ಸಮರ್ಪಕವಾಗಿ ಮಳೆ ಬೀಳದ ಹಿನ್ನೆಲೆ ಹಾಗೂ ತಾಲೂಕಿನ ಕೆರೆಗಳಿಗೆ ನೀರು ತುಂಬಿಸದ ಪರಿಣಾಮ ತಾಲೂಕಿನಾದ್ಯಂತ ಅಂತರ್ಜಲ ಕೊರತೆ ತೀವ್ರವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಭಾರಿ ಸವಾಲು ಎದುರಾಗಿದೆ.
ಕಳೆದ ವರ್ಷ ಸಮರ್ಪಕವಾಗಿ ಮಳೆ ಬೀಳದೆ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿತ್ತು. ಅಲ್ಲದೆ ಕಳೆದ ಮೂರು ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸದ ಪರಿಣಾಮ ತಾಲೂಕಿನ ದೊಡ್ಡ ಹಾಗೂ ಸಣ್ಣಪುಟ್ಟ ಕೆರೆಕಟ್ಟೆಗಳೂ ಸಂಪೂರ್ಣ ಬತ್ತಿಹೋಗಿವೆ.
ಈ ನಡುವೆ ನದಿಯಿಂದ ನೀರೆತ್ತುವ ಪಂಪ್ ಹೌಸ್‌ಗಳಲ್ಲಿ ಮೋಟಾರ್‌ಗಳು ಕೆಟ್ಟುಹೋದ ಪರಿಣಾಮ ನದಿಯಲ್ಲಿ ನೀರಿನ ಹರಿವಿದ್ದರೂ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಕೆಟ್ಟುಹೋದ ಮೋಟಾರ್‌ಗಳ ದುರಸ್ತಿಗೆ ಹೆಚ್ಚಿನ ಅನುದಾನ ಹಾಗೂ ಕಾಲಾವಕಾಶ ಬೇಕಾಗಿದ್ದರಿಂದ ಏಪ್ರಿಲ್ ಮಧ್ಯಭಾಗದಲ್ಲಿಯೂ ಕೆರೆಗಳಿಗೆ ನೀರು ಹರಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿಯೂ ಕೆರೆಗಳಿಗೆ ನೀರು ಹರಿಸದಿದ್ದರೆ ಮತ್ತು ಸಮೃದ್ಧವಾಗಿ ಮಳೆ ಬೀಳದಿದ್ದರೆ ಏನು ಮಾಡಬೇಕು ಎಂದು ರೈತರು ಚಿಂತಿಸುತ್ತಿದ್ದಾರೆ. ಜತೆಗೆ ಅರಿಶಿಣ ಭಿತ್ತನೆಯನ್ನೂ ಮುಂದೂಡುತ್ತಿದ್ದಾರೆ.
ಕಳಚಿ ಬೀಳುತ್ತಿರುವ ತೆಂಗಿನ ಗರಿಗಳು: ಕಳೆದ ವರ್ಷ ಚಾಮರಾಜನಗರ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಈ ಬಾರಿ ನಮ್ಮ ಕೆರೆಗಳಿಗೆ ನೀರು ಬಿಡುತ್ತಾರೆ ಎಂಬ ನಿರೀಕ್ಷೆಯಿಂದ ಕಳೆದ ವರ್ಷ ಹೆಚ್ಚಿನ ರೈತರು ಕಳೆದ ಬಾರಿ ಬಾಳೆ ಹಾಗೂ ಅರಿಶಿಣ ಬೆಳೆ ಬೆಳೆದಿದ್ದರು. ಆದರೆ ಸಮರ್ಪಕವಾಗಿ ನೀರು ದೊರಕದ ಜಮೀನುಗಳಲ್ಲಿ ಬಾಳೆ ಗಿಡಗಳು ತಮ್ಮಷ್ಟಕ್ಕೆ ತಾವೇ ಮುರಿದು ಬೀಳುತ್ತಿವೆ. ತೆಂಗಿನ ಮರಗಳು ಹೂಬಿಟ್ಟರೂ ಕಾಯಿ ಗಾತ್ರ ಕಡಿಮೆಯಾಗುತ್ತಿದೆ. ಅಲ್ಲದೆ ಗರಿಗಳು ಹಾಗೂ ಕಾಯಿಗಳು ಗೊಂಚಲು ಸಮೇತ ಕಳಚಿ ಬೀಳುತ್ತಿವೆ.
ಹೆಚ್ಚುವರಿ ಪೈಪ್ ಅಳವಡಿಕೆ: ತಾಲೂಕಿನ ಶಿಂಡನಪುರ, ಕೊಡಸೋಗೆ, ವಡ್ಡಗೆರೆ, ಬೊಮ್ಮಲಾಪುರ, ಬೊಮ್ಮನಹಳ್ಳಿ, ಬಲಚವಾಡಿ, ಪಡಗೂರು, ನೇನೆಕಟ್ಟೆ, ಅಗತಗೌಡನಹಳ್ಳಿ, ಹಂಗಳ, ದೇವರಹಳ್ಳಿ, ಹಸಗೂಲಿ ಮುಂತಾದ ಗ್ರಾಮಪಂಚಾಯಿತಿ ಹಾಗೂ ಕೆರೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತವಾಗುತ್ತಿದೆ. ಯಾವುದೇ ದೊಡ್ಡ ಕೆರೆಕಟ್ಟೆಗಳ ಆಶ್ರಯವಿಲ್ಲದ ಕಂದೇಗಾಲ, ಶಿಂಡನಪುರ, ಬೆಟ್ಟಹಳ್ಳಿ, ದೊಡ್ಡತುಪ್ಪೂರು, ತ್ರಿಯಂಭಕಪುರ, ಬೆರಟಹಳ್ಳಿ ಮುಂತಾದ ಗ್ರಾಮಗಳಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಸಂಪೂರ್ಣ ಕಡಿಮೆಯಾಗಿದೆ. ಈ ಭಾಗದ ರೈತರು ತಮ್ಮ ಕೊಳವೆ ಬಾವಿಗಳಿಗೆ ಇನ್ನೂ ಹೆಚ್ಚಿನ ಪೈಪ್ ಇಳಿಸಿದರೂ ಸಮರ್ಪಕ ಪ್ರಮಾಣದ ನೀರು ಬರದಂತಾಗಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಿದರೂ ನೀರು ದೊರಕದೆ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಬೆಳೆದ ಬೆಳೆಗಳ ರಕ್ಷಣೆಗೆ ಟ್ಯಾಂಕರ್ ಮೊರೆಹೋಗುತ್ತಿದ್ದಾರೆ. ಇತರ ಭಾಗಗಳಲ್ಲಿಯೂ ಅಂತರ್ಜಲ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಬಿಸಿಲಿನ ತಾಪಕ್ಕೆ ದಿನೇ ದಿನೆ ಸಮಸ್ಯೆ ಉಲ್ಬಣಿಸುತ್ತಿದೆ.
ನೀರು ಹರಿಸುವ ಯೋಜನೆ ವರದಾನವಾಗಿತ್ತು: ಯಾವುದೇ ನೀರಾವರಿ ಮೂಲಗಳಿಲ್ಲದೆ ಸಾವಿರಾರು ಅಡಿಗಳವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ದೊರಕದೆ ಅಂತರ್ಜಲ ಬಳಕೆ ಮಾಡಿಕೊಂಡಿದ್ದ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸುವ ಯೋಜನೆ ವರದಾನವಾಗಿದೆ.
ಕಳೆದ 5 ವರ್ಷಗಳ ಹಿಂದೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಿದ ಸಂದರ್ಭದಲ್ಲಿ ಉತ್ತಮ ಮಳೆಯೂ ಬಿದ್ದಿತ್ತು. ಇದರಿಂದ ದೊಡ್ಡ ದೊಡ್ಡ ಕೆರೆಗಳು ಹಾಗೂ ನೀರನ್ನೇ ಕಂಡಿರದ ಕಟ್ಟೆಗಳು ತುಂಬಿ ಕೋಡಿಬಿದ್ದ ನೀರು ಹಳ್ಳಕೊಳ್ಳಗಳಲ್ಲಿ ಹರಿದುಹೋಗಿತ್ತು. ಪರಿಣಾಮ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿಯೂ ನೀರು ಉಕ್ಕಿಬರುವಂತಾಗಿದ್ದರಿಂದ ಎಲ್ಲ ರೈತರೂ ತಮ್ಮ ಜಮೀನುಗಳಲ್ಲಿ ಬಾಳೆ, ಅರಿಶಿಣ, ಕಬ್ಬು, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದರು. ಆದರೆ ಕಳೆದ ಮೂರು ವರ್ಷಗಳಿಂದ ಮಳೆಯೂ ಕಡಿಮೆಯಾಗಿದೆ. ಜತೆಗೆ ನದಿಮೂಲದಿಂದ ಕೆರೆಗಳನ್ನು ತುಂಬಿಸದಿರುವುದು ಅಂತರ್ಜಲ ಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗಿದ್ದು ತಾಲೂಕು ಹಿಂದಿನ ಸ್ಥಿತಿಗೆ ಮರಳುವ ಭೀತಿ ಎದುರಿಸುವಂತಾಗಿರುವುದು ಅನ್ನದಾತರನ್ನು ಕಂಗೆಡಿಸಿದೆ.