ಗುಂಡ್ಲುಪೇಟೆ ಪಟ್ಟಣ ಪುರಸಭೆ 17ನೇ ವಾರ್ಡ್ ಕುರುಬ ಸಮುದಾಯ ಬೀದಿಯಲ್ಲಿ ಮುಖ್ಯಾಧಿಕಾರಿ ಶರವಣ ಸಾರ್ವಜನಿಕರಿಗೆ ನಾಲ್ಕು ವಿಧದ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಿದರು.
- ಪುರಸಭಾ ಮುಖ್ಯಾಧಿಕಾರಿ ಶರವಣ ಮನವಿ
ಗುಂಡ್ಲುಪೇಟೆ: ನಾಗರಿಕರು ಮನೆಗಳಲ್ಲಿ ಸಂಗ್ರಹವಾಗುವ ಏಕಬಳಕೆ ವಸ್ತುಗಳನ್ನು ನಾಲ್ಕು ವಿಧಗಳಾಗಿ ಪ್ರತ್ಯೇಕಿಸಿ ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕೆಂದು ಪುರಸಭಾ ಮುಖ್ಯಾಧಿಕಾರಿ ಶರವಣ ಮನವಿ ಮಾಡಿದರು.
ಪಟ್ಟಣ ಪುರಸಭೆ 17ನೇ ವಾರ್ಡ್ ಕುರುಬ ಸಮುದಾಯ ಬೀದಿಯಲ್ಲಿ ಸಾರ್ವಜನಿಕರಿಗೆ ನಾಲ್ಕು ವಿಧದ ತ್ಯಾಜ್ಯದ ಬಗ್ಗೆ ಅರಿವು ಮೂಡಿಸಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ನೂತನ ಘನತ್ಯಾಜ್ಯ ನಿರ್ವಹಣೆ ನಿಯಮಗಳನ್ವಯ ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಪಟ್ಟಣದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವ ಮೂಲಕ ಪುರಸಭೆಗೆ ಸಹಕರಿಸಬೇಕು ತಿಳಿಸಿದರು.
ಹಸಿ ಕಸ(ಹಸಿರು ಬಕೆಟ್): ಅಡುಗೆ ಮನೆಯಲ್ಲಿ ಉಳಿಕೆಯಾದ ಆಹಾರ, ತರಕಾರಿ-ಹಣ್ಣುಗಳ ಸಿಪ್ಪೆ, ಕೊಳೆತ ವಸ್ತುಗಳು ಮತ್ತು ಪೂಜಾ ಹೂವುಗಳು. ಒಣ ಕಸ(ನೀಲಿ ಬಕೆಟ್)- ಪ್ಲಾಸ್ಟಿಕ್ ಬಾಟಲಿಗಳು, ಕಾಗದ, ಕಾರ್ಡ್‌ಬೋರ್ಡ್, ಗಾಜು, ಒಣಗಿದ ವಸ್ತುಗಳು ಮತ್ತು ಮರುಬಳಕೆ ಮಾಡಬಹುದಾದ ಸಾಮಗ್ರಿಗಳು. ನೈರ್ಮಲ್ಯ ತ್ಯಾಜ್ಯ(ಕೆಂಪು ಬಕೆಟ್): ಬಳಸಿದ ಡೈಪರ್‌ಗಳು, ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಬ್ಯಾಂಡೇಜ್ ಮತ್ತು ವೈದ್ಯಕೀಯ ತ್ಯಾಜ್ಯಗಳನ್ನು ಕಡ್ಡಾಯವಾಗಿ ಪೇಪರ್‌ನಲ್ಲಿ ಸುತ್ತಿರಬೇಕು, ವಿಶೇಷ ಕಾಳಜಿ ತ್ಯಾಜ್ಯ, ಅಪಾಯಕಾರಿ ಕಸ(ಕಪ್ಪು ಬಕೆಟ್), ಹಳೇ ಬ್ಯಾಟರಿಗಳು, ಇ-ತ್ಯಾಜ್ಯ(ಎಲೆಕ್ಟ್ರಾನಿಕ್ ವಸ್ತುಗಳು), ಅವಧಿ ಮುಗಿದ ಔಷಧಗಳು, ಸಿಎಫ್‌ಎಲ್ ಬಲ್ಬ್‌ಗಳು ಮತ್ತು ರಾಸಾಯನಿಕ ಬಾಟಲಿಗಳಿಗಳನ್ನ ಪ್ರತ್ಯೇಕಿಸಿ ನೀಡಬೇಕು ಎಂದು ಅರಿವು ಮೂಡಿಸಿದರು.
ಕಸ ಬೀಸಾಡಿದರೆ ದಂಡ: ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದ್ದು ಸ್ವಚ್ಛತೆ ನಿಯಮ ಉಲ್ಲಂಘಿಸುವವರ ವಿರುದ್ಧ ಪುರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ನೂತನ ನಿಯಮಾವಳಿಗಳ ಪ್ರಕಾರ ಮೊದಲ ಬಾರಿ ನಿಯಮ ಉಲ್ಲಂಘನೆಗೆ 500 ರೂ. ದಂಡ, ಎರಡನೇ ಬಾರಿ 1000 ರೂ.ಹಾಗೂ ಮೂರನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ನೋಟಿಸ್ ಜಾರಿ ಮತ್ತು ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು. ಪಟ್ಟಣವನ್ನು ಕಸಮುಕ್ತ ಹಾಗೂ ಸುಂದರ ಪಟ್ಟಣವನ್ನಾಗಿಸಲು ಪ್ರತಿಯೊಬ್ಬ ನಾಗರಿಕರ ಪಾತ್ರ ಮುಖ್ಯವಾಗಿದೆ. ನಿಮ್ಮ ಕಸ ನಿಮ್ಮ ಜವಾಬ್ದಾರಿ ಎಂಬ ಧ್ಯೇಯವಾಕ್ಯದೊಂದಿಗೆ ಸಾರ್ವಜನಿಕರು ಪುರಸಭೆಯ ಸ್ವಚ್ಛತಾ ಸಿಬ್ಬಂದಿಗೆ ಹಾಗೂ ಕಸ ಸಂಗ್ರಹಣಾ ವಾಹನಗಳಿಗೆ ಕಸವನ್ನು ವಿಂಗಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.