ಮಲೆಮಹದೇಶ್ವರ ಬೆಟ್ಟದಲ್ಲಿ ದೊಡ್ಡ ಸತ್ತಿಗೆಯನ್ನು ಪಡೆದ ಸರಗೂರು ಗ್ರಾಮಸ್ಥರು ತಂಬಡಿಗೇರಿಯಲ್ಲಿ ಮೆರವಣಿಗೆ ನಡೆಸಿ ಗ್ರಾಮಕ್ಕೆ ಕೊಂಡೊಯ್ದರು.  
ಚಾಮರಾಜನಗರ

ದುರಸ್ತಿಗಾಗಿ ದೊಡ್ಡ ಸತ್ತಿಗೆ ರವಾನೆ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ದೊಡ್ಡ ಸತ್ತಿಗೆಗೆ ವಿಶೇಷ ಪೂಜೆ ಸಲ್ಲಿಸಿ ರಿಪೇರಿ ಕಾರ್ಯಕ್ಕಾಗಿ ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಕಳುಹಿಸಿ ಕೊಡಲಾಯಿತು.
ಮಾದಪ್ಪನ ಸನ್ನಿಧಿಗೆ ಸರಗೂರು ಗ್ರಾಮಸ್ಥರು ಕೊಡುಗೆಯಾಗಿ ನೀಡಿದ್ದು, ಬೆಳ್ಳಿಯಿಂದ ಕೂಡಿರುವ ಈ ದೊಡ್ಡ ಸತ್ತಿಗೆಯನ್ನು ಉತ್ಸವಗಳು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪೂಜಿಸಲಾಗುತ್ತದೆ. ಗ್ರಾಮಸ್ಥರು ಮಾದಪ್ಪ ಎಂದು ಪೂಜಿಸುತ್ತಾರೆ. ಆದರೆ ಇತ್ತೀಚಿಗೆ ಸತ್ತಿಗೆಯಲ್ಲಿ ಕೆಲ ದುರಸ್ತಿ ಕಾರ್ಯ ಅಗತ್ಯತೆ ಇತ್ತು. ಇದನ್ನು ಮನಗಂಡ ಗ್ರಾಮಸ್ಥರು ರಿಪೇರಿ ಕಾರ್ಯಕ್ಕೆ ನಿರ್ಧರಿಸಿದ್ದು, ಸೋಮವಾರ ಮಾದಪ್ಪನ ಸನ್ನಿಧಿಗೆ ಆಗಮಿಸಿದರು.
ಗ್ರಾಮಸ್ಥರು, ಸ್ಥಳೀಯ ಭಕ್ತರು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ವಿಶೇಷ ಪೂಜೆಯನ್ನು ನೆರವೇರಿಸಿದರು. ಬಳಿಕ ಹಸ್ತಾಂತರ ಪಡೆದುಕೊಂಡ ಗ್ರಾಮಸ್ಥರು ದೊಡ್ಡ ಸತ್ತಿಗೆಯನ್ನು ದೇಗುಲದ ಮುಂಭಾಗದಿಂದ ತಂಬಡಿಗೇರಿವರೆಗೂ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಭಕ್ತಿ ಭಾವದಿಂದ ಗ್ರಾಮಕ್ಕೆ ಕೊಂಡೊಯ್ದರು.