ಲೊಕ್ಕನಹಳ್ಳಿ ಕಿಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಪಾಲಕರು-ಶಿಕ್ಷಕರ ಸಭೆಯನ್ನು ಬಿಇಒ ಮಹೇಶ್ ಉದ್ಘಾಟಿಸಿದರು. ಮಂಗಳಾ, ಮಾದೇಶ್, ವೆಂಕಟೇಶ್ ಇತರರು ಇದ್ದರು.  
ಚಾಮರಾಜನಗರ

ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಸಲಹೆ
ಹನೂರು: ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.
ಶೈಕ್ಷಣಿಕ ವಲಯದ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪಾಲಕರು- ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಹಾಗಾಗಿ ಸರ್ಕಾರ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಬಿಸಿಯೂಟ, ಶೂ, ಬ್ಯಾಗ್, ಮೊಟ್ಟೆ, ಹಾಲು, ವಿತರಣೆ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸವಲತನ್ನು ಒದಗಿಸಲಾಗುತ್ತಿದೆ. ಶೈಕ್ಷಣಿಕ ವಲಯದ ಶಾಲೆಗಳಲ್ಲಿ ಮಕ್ಕಳ ಕಲಿಕೆಯನ್ನು ಪರೀಕ್ಷಿಸಲು ನಿರಂತರ ಅನುಪಾಲನೆ ಮೂಲಕ ಪಾಠ ಆಧಾರಿತ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಬೇಕು. ಮನೆಯಲ್ಲಿ ಮಕ್ಕಳ ಕಲಿಕೆಗೆ ಉತ್ತೇಜನ ನೀಡಬೇಕು. ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡುವ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಲೊಕ್ಕನಹಳ್ಳಿ ಕೆಪಿಎಸ್ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಮಂಗಳಾ, ಎಸ್‌ಡಿಎಂಸಿ ಅಧ್ಯಕ್ಷ ಮಾದೇಶ್, ಉಪಾಧ್ಯಕ್ಷೆ ಚೈತ್ರಾ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಮಹೇಶ್, ಚಿನ್ನಪ್ಪಯ್ಯ, ಸಿಆರ್‌ಪಿ ಅನ್ವರ್‌ಪಾಷ, ಮುಖ್ಯ ಶಿಕ್ಷಕ ಮಾದೇಶ್ ಇತರರಿದ್ದರು.