ಬಿಳಿಗಿರಿ ರಂಗನಬೆಟ್ಟದ ದೇವಸ್ಥಾನದ ತೆರಳುವ ಮಾರ್ಗ ರಸ್ತೆಯ ಬದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುತ್ತಿರುವ ಯುವಕರು. 
ಚಾಮರಾಜನಗರ

ಬಿ.ಬೆಟ್ಟದಲ್ಲಿ ಸೆಲ್ಫಿ ಹುಚ್ಚು ಸಾಹಸ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಕಣ್ಣುಮುಚ್ಚಿ ಕುಳಿತ ಪೊಲೀಸ್ , ಪ್ರವಾಸೋದ್ಯಮ ಇಲಾಖೆ
  • ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ
ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ತೆರಳುವ ರಸ್ತೆಯ ಮಾರ್ಗ ಬದಿ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೆ ಯಮ ಲೋಕದ ಅತಿಥಿಗಳಾಗುತ್ತಾರೆ.!
ಬಿಳಿಗಿರಿ ರಂಗನಬೆಟ್ಟವು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿದ್ದು, ಸಮುದ್ರ ಮಟ್ಟದಿಂದ 2800 ಅಡಿಗಳ ಎತ್ತರದಲ್ಲಿದೆ. ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲಿ ಬಿಳಿಗಿರಿರಂಗನ ಬೆಟ್ಟವೂ ಒಂದಾಗಿದ್ದು, ನಿತ್ಯವೂ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸ್ತಾರೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ, ಇಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳು ಪ್ರವಾಸಿಗರನ್ನು ಅಕರ್ಷಿಸುತ್ತದೆ. ಅದರಲ್ಲೂ ಬಿಳಿಯ ಏಕಶಿಲೆಯಿಂದ ರಚನೆಯಾಗಿರುವ ಕಮರಿ ಇಲ್ಲಿನ ಪ್ರಮುಖ ಅಕರ್ಷಣೆಯಾಗಿದ್ದು, ಇದನ್ನು ನೋಡಲು ಎಷ್ಟು ರಮಣೀಯವೋ, ಹಾಗೆಯೇ ಆತ್ಮಹತ್ಯೆ ತಾಣವಾಗಿಯೂ ಕುಖ್ಯಾತಿಯಾಗಿದೆ. ಇಂತಹ ತಾಣದಲ್ಲಿ ಇದೀಗ ಯುವ ಸಮೂಹ ಸೆಲ್ಫಿಗೆ ಹಾತೊರೆಯುತ್ತಿದ್ದು, ಸಾವಿನ ಜತೆ ಸರಸವಾಡುತ್ತಿದ್ದಾರೆ. ಈ ಬಗ್ಗೆ ಸಂಬಂದಪಟ್ಟ ಇಲಾಖೆಯು ಈ ಸ್ಥಳದಲ್ಲಿ ಸೂಚನೆ ಫಲಕ, ಪ್ರವಾಸಿಗರ ಸಂರಕ್ಷಣೆ ಮಾಡುವ ಎತ್ತರದ ತಡೆಗೋಡೆ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ.
ಪ್ರವಾಸಿಗರ ನೆಚ್ಚಿನ ತಾಣ:
ಬಿಳಿಗಿರಿ ರಂಗನಬೆಟ್ಟದ ದೇವಸ್ಥಾನಕ್ಕೆ ತೆರಳುವ ಮಾರ್ಗ ಬದಿ ಹಾಗೂ ಕಮರಿ ಪ್ರವಾಸಿಗರ ನೆಚ್ಚಿನ ತಾಣ. ಆ ಸ್ಥಳದಿಂದ ನಿಂತು ವೀಕ್ಷಣೆ ಮಾಡಿದರೆ, ಬಿಳಿಗಿರಿ ರಂಗನಬೆಟ್ಟದ ಸಂರ್ಪೂಣವಾಗಿ ಕಂಡುಬರುತ್ತದೆ. ಅದರಲ್ಲೂ ಇತ್ತೀಚೆಗೆ ಜಾತ್ರೆ ನಿಮಿತ್ತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಕರು ಇಲ್ಲಿ ಧಾವಿಸುತ್ತಾರೆ. ಇದರಿಂದಾಗಿ ಕಮರಿಯ ಸುತ್ತಮುತ್ತ ನಿಂತು ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸೆಲ್ಫಿ ಮೋಹದಿಂದ ಸ್ವಲ್ಪ ಯಾಮಾರಿದರೆ,ಪ್ರವಾಸಿಗರು ಯಮನ ಪಾದ ಸೇರುವುದು ಖಚಿತ. ಇಷ್ಟಾದರೂ ಯುವಕರು ಸೆಲ್ಫಿ ತೆಗೆದುಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ.
ಆಡಳಿತ ಮಂಡಳಿ ನಿರ್ಲಕ್ಷ್ಯ :
ಬಿಳಿಗಿರಿ ರಂಗನಬೆಟ್ಟದ ಕಮರಿ ಖ್ಯಾತಿಯೊಂದಿಗೆ ಆತ್ಮಹತ್ಯೆ ತಾಣವಾಗಿಯೂ ಕುಖ್ಯಾತಿ ಗಳಿಸಿದೆ. ಹಲವು ಮಂದಿ ಈ ಕಮರಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಪ್ರಕೃತಿ ಸೊಬಗನ್ನು ಸವಿಯುವ ಸಲುವಾಗಿ ರಸ್ತೆಯ ಬದಿ ಹಾಗೂ ಕಮರಿ ಬಂಡೆಯ ತುತ್ತ ತುದಿ ತಲುಪಿ ಸಾವನ್ನಪ್ಪಿರುವ ನಿದರ್ಶನಗಳೂ ಸಹ ಇವೆ. ಹೀಗಿದ್ದರೂ ಬಿಳಿಗಿರಿರಂಗನ ಬೆಟ್ಟ ದೇವಸ್ಥಾನ ಆಡಳಿತ ಮಂಡಳಿಯಾಗಲಿ, ಅಲ್ಲಿನ ಪೊಲೀಸರಾಗಲಿ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ಪ್ರವಾಸಿಗರ ರಕ್ಷಣೆಗೆ ಈ ಸ್ಥಳಗಳಲ್ಲಿ ನಿಯೋಜನೆಯಾಗಿಲ್ಲ. ಕಮರಿಗೆ ಅಡ್ಡಲಾಗಿ ಸುಮಾರು ವರ್ಷಗಳ ಹಿಂದೆ ಕಬ್ಬಿಣದ ರಕ್ಷಣಾ ಬೇಲಿಯನ್ನು ಅಳವಡಿಸಲಾಗಿದೆ. ಆದರ ರಕ್ಷಣ ಬೇಲಿ ದುರಸ್ಥಿಯಲ್ಲಿದೆ. ಹೀಗಾಗಿ ಕಮರಿಯ ತುತ್ತ ತುದಿ ತಲುಪುವವರ ಸಂಖ್ಯೆ ಕಡಿಮೆಯಾಗಿಲ್ಲ. ಜೀವನದಲ್ಲಿ ಜಿಗುಪ್ಸೆ, ಭಗ್ನ ಪ್ರೇಮಿಗಳು, ಆಕಸ್ಮಿಕ ಸಾವನ್ನಪ್ಪಿರುವ ನಿದರ್ಶನಗಳು ಇರುವಾಗಲೇ ಈಗ ಅ ಪ್ರದೇಶದಲ್ಲಿ ಸೆಲ್ಫಿ ಗೀಳು ಹತ್ತಿಸಿಕೊಂಡ ಯುವಪಡೆ, ಕಮರಿಯ ಬಂಡೆ ತಲುಪಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಅವರಿಗೆ ಯಾವುದೇ ಸಾವು ನೋವಿನ ಭಯವೂ ಕಂಡು ಬರುತ್ತಿಲ್ಲ ಎಂಬುದು ಅವರ ಸೆಲ್ಫಿ ಚಿತ್ರಗಳನ್ನು ಗಮನಿಸಿದರೇ ಅರ್ಥವಾಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ಇನ್ನಾದರೂ ಪೊಲೀಸರು, ದೇವಸ್ಥಾನದ ಆಡಳಿತ ಮಂಡಳಿಯವರು ಕಠಿಣ ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಪ್ರವಾಸಿಗರ ಒತ್ತಾಯವಾಗಿದೆ. ಮೋಜಿನ ಹುಮ್ಮಸ್ಸಿನಲ್ಲಿರುವ ಯುವಪಡೆಯನ್ನು ರಕ್ಷಿಸಲು ಸಂಬಂಧಪಟ್ಟವರು ಸೂಕ್ತ ಸೂಚನಾ ಫಲಕ, ತಡೆಗೋಡೆ ಅಥವಾ ತಂತಿ ಬೇಲಿಹಾಕುವ ನಿಟ್ಟಿನಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ವಹಿಸಬೇಕು ಎಂಬುದಷ್ಟೇ ಸಾರ್ವಜನಿಕರ ಕಾಳಜಿ.
"

ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಸ್ತೆಯ ಬದಿಯಲ್ಲಿ ವೀವ್ ಪಾಯಿಂಟ್ ಗಳಲ್ಲಿ ತಡೆಗೋಡೆಯ ಮೇಲೆ ಸೆಲ್ಫಿ, ತಗೆದುಕೊಳ್ಳದತೆ ಸೂಚಿಸಲು ಪೊಲೀಸ್ ಸಿಬ್ಬಂದಿ ನೀಯೋಜನೆ ಮಾಡಲಾಗುವುದು. ಸೂಕ್ತ ಸೂಚನೆ ಫಲಕವನ್ನು ಅಳವಡಿಸಲಾಗುವುದು.

— ಜಿ.ಕೆ.ಸುಬ್ರಮಣ್ಯ, ಇನ್‌ಸ್ಪೆಕ್ಟರ್ ಯಳಂದೂರು