ಹಲಗಾಪುರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ರಚಿಸುವ ಸಂಬಂಧ ನಡೆದ ಗ್ರಾಮಸಭೆಯಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಮಾತನಾಡಿದರು. ವೆಂಕಟೇಶ್, ಸುರೇಶ್, ರಾಜಶೇಖರ್, ಮಹದೇವಪ್ರಭು ಇತರರಿದ್ದರು.  
ಚಾಮರಾಜನಗರ

ಹಲಗಾಪುರ ಡೇರಿ ರಚನೆಗೆ ಪ್ರವರ್ತಕರ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಚಾಮುಲ್ ಮೂಲಕ ಸಹಕಾರ ಇಲಾಖೆಗೆ ಶಿಫಾರಸು
ಹನೂರು: ತಾಲೂಕಿನ ಹಲಗಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ರಚಿಸುವ ಸಂಬಂಧ ಶನಿವಾರ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಅಧ್ಯಕ್ಷತೆಯಲ್ಲಿ ಪ್ರವರ್ತಕರು ಹಾಗೂ ಮುಖ್ಯ ಪ್ರವರ್ತಕರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕರಿದ್ದು, ಸ್ಥಾಪನೆಯಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘವು ಕಳೆದ 20 ವರ್ಷದ ಹಿಂದೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಇದರಿಂದ ಗ್ರಾಮದ ರೈತರು ಖಾಸಗಿ ಹಾಗೂ ಸಮೀಪದ ಶಾಗ್ಯ ಗ್ರಾಮದ ಡೇರಿಗೆ ಹಾಲನ್ನು ಪೂರೈಕೆ ಮಾಡುತ್ತಿದ್ದರು. ಆದರೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗುತ್ತಿರಲಿಲ್ಲ. ಹಾಗಾಗಿ ಗ್ರಾಮದಲ್ಲಿ ಡೇರಿ ರಚನೆ ಮಾಡುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಒತ್ತಾಯಿಸಿದ್ದರು.
ಹಲವು ಬಾರಿ ಗ್ರಾಮಸಭೆಯನ್ನು ನಡೆಸಿದರೂ ಗ್ರಾಮಸ್ಥರಲ್ಲಿ ಒಮ್ಮತವಿಲ್ಲದ ಪರಿಣಾಮ ಡೇರಿ ರಚನೆ ಸಾಧ್ಯವಾಗಿರಲಿಲ್ಲ. ಇದೀಗ ಒಕ್ಕೊರಲಿನಿಂದ ಒತ್ತಾಯ ಕೇಳಿ ಬಂದ ಹಿನ್ನೆಲೆ ಶನಿವಾರ ಗ್ರಾಮಸಭೆ ಆಯೋಜಿಸಲಾಗಿತ್ತು. ನಿಯಮಾವಳಿಯಂತೆ ಆರಂಭಿಕವಾಗಿ 20 ಪ್ರವರ್ತಕರು ಹಾಗೂ ಮುಖ್ಯ ಪ್ರವರ್ತಕರಾಗಿ ಸುರೇಶ್ ಅವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಇದಕ್ಕೂ ಮೊದಲು ಉದ್ದನೂರು ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಹಿಂದೆ ಪ್ರತಿನಿತ್ಯ ಸರಾಸರಿ 80 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆದರೀಗ ಮಳೆ ಕೊರತೆ ನಡುವೆಯೂ 1.20 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದಕ್ಕೆ ಹೆಚ್ಚು ರೈತರು ಕೃಷಿಯ ಜತೆಗೆ ಹೈನುಗಾರಿಕ ಅವಲಂಬಿಸಿರುವುದೇ ಕಾರಣವಾಗಿದೆ. ಆದರೆ ಪ್ರತಿನಿತ್ಯ ಸುಮಾರು ಮೂರೂವರೆ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವ ಹಲಗಾಪುರ ಗ್ರಾಮದಲ್ಲಿ ಡೇರಿ ರಚನೆಯಾಗದಿರುವುದು ನಿಜಕ್ಕೂ ಬೇಸರದ ಸಂಗತಿ. ಇದರಿಂದ ರೈತರು ಸರ್ಕಾರದಿಂದ ಸಿಗುವ ಸವಲತ್ತಿನಿಂದ ವಂಚಿತರಾಗಿದ್ದಾರೆ. ಆದ್ದರಿಂದ ಡೇರಿ ಸ್ಥಾಪನೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಚಾಮುಲ್ ವಿಸ್ತರಣಾಧಿಕಾರಿ ವೆಂಕಟೇಶ್ ಮಾತನಾಡಿ, ಈಗಾಗಲೇ ಗ್ರಾಮಸ್ಥರ ಸಮ್ಮುಖದಲ್ಲೇ ಪ್ರವರ್ತಕರನ್ನು ಆಯ್ಕೆ ಮಾಡಲಾಗಿದ್ದು, ಡೇರಿ ರಚನೆ ಸಂಬಂಧ ಒಕ್ಕೂಟದ ಮೂಲಕ ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗುವುದು. ನೋಂದಣಿಯಾದ ಬಳಿಕ ಆಡಳಿತ ಮಂಡಳಿಯನ್ನು ರಚಿಸಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ರೈತರಿಂದ ಹಾಲು ಸಂಗ್ರಹಿಸಲಾಗುವುದು ಎಂದರು.
ವಿಸ್ತರಣಾಧಿಕಾರಿ ರಾಜು, ಸಬ್ ಇನ್‌ಸ್ಪೆಕ್ಟರ್ ರವಿ, ಮುಖಂಡರಾದ ಮಹದೇವಪ್ರಭು, ಮಹದೇವಪ್ಪ, ಸೋಮಣ್ಣ, ರಾಜಶೇಖರ್, ಗುರುಪಾದಸ್ವಾಮಿ, ವೀರಭದ್ರಪ್ಪ, ಲಕ್ಷ್ಮಣ, ನಾಗಪ್ಪ, ರಾಚಪ್ಪ ಇತರರಿದ್ದರು.