ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಸ್ತೆಯಲ್ಲಿ ತರಕಾರಿ ವಾಹನಗಳ ಮೇಲೆ ದಾಳಿ ನಡೆಸುತ್ತಿರುವ ಆನೆ. 
ಚಾಮರಾಜನಗರ

ವಾಹನಗಳ ಅಡ್ಡಗಟ್ಟುತ್ತಿದ್ದ ಸಲಗಕ್ಕೆ ಹುಡುಕಾಟ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಬಂಡೀಪುರದ ರಸ್ತೆಯಲ್ಲಿ ದಾಳಿ ಮಾಡುತ್ತಿರುವ ಆನೆ
  • ವರದಿ ಬಂದ ಬಳಿಕ ಸೆರೆ ಕಾರ್ಯಾಚರಣೆ

ಗುಂಡ್ಲುಪೇಟೆ:

ಕಳೆದ ಎರಡು ಮೂರು ತಿಂಗಳಿಂದ ಬಂಡೀಪುರದ ರಸ್ತೆಯಲ್ಲಿ ತರಕಾರಿ-ಹಣ್ಣುಗಳನ್ನು ತಿನ್ನಲು ಲಾರಿಗಳನ್ನು ಅಡ್ಡಗಟ್ಟುತ್ತಿರುವ ಸಲಗನ ಹಿಡಿಯಲು ಅರಣ್ಯಾಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತಮಿಳುನಾಡು ಅರಣ್ಯದಿಂದ ಹೊರಬಂದ ಆನೆಯೊಂದು ಕೆಲ ತಿಂಗಳಿನಿಂದ ಬಂಡೀಪುರ ರಸ್ತೆಯಲ್ಲಿ ಸಂಚರಿಸುವ ಹಣ್ಣು-ತರಕಾರಿ ವಾಹನಗಳನ್ನು ಅಡ್ಡಗಟ್ಟಿ ಚೀಲಗಳನ್ನು ಹೊರಗೆಳೆದು ಹಾಕುತ್ತಿದೆ. ರಸ್ತೆಯ ಡುಬ್ಬಗಳ ಸಮೀಪ ಸರಕು ಸಾಗಣೆ ವಾಹನಗಳು ವೇಗ ಕಡಿಮೆ ಮಾಡುತ್ತಿದ್ದಂತೆ ಅವುಗಳ ಬಳಿ ಹೋಗುವ ಆನೆ ಟಾರ್ಪಾಲ್ ಮುಚ್ಚಿದ್ದರೂ ದಂತದಿಂದ ಮೇಲೆತ್ತಿ ಚೀಲವನ್ನು ಹೊರಗೆಳೆದು ನೆಲಕ್ಕೆ ಕೆಡವಿ ಒಳಗಿರುವ ಹಣ್ಣು, ತರಕಾರಿಗಳನ್ನು ತಿನ್ನುತ್ತಿದೆ.
ಆನೆ ರಸ್ತೆಗೆ ಬಂದ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬರುವ ಅರಣ್ಯ ಸಿಬ್ಬಂದಿ ಜೀಪಿನ ಸೈರನ್ ಮೊಳಗಿಸುತ್ತಾ ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಾರೆ. ಸೈರನ್ ಶಬ್ದಕ್ಕೂ ಅಳುಕದೆ ಆನೆಯನ್ನು ಪಟಾಕಿ ಸಿಡಿಸುತ್ತಾ ಕಾಡಿನೊಳಗೆ ಅಟ್ಟುತ್ತಿದ್ದಾರೆ.
ಕಾಡಿನೊಳಗೆ ಹೋದ ಆನೆ ಒಮ್ಮೆ ಕೆಕ್ಕನಹಳ್ಳ ರಸ್ತೆಯಲ್ಲಿ ಮತ್ತೊಮ್ಮೆ ಮೂಲೆಹೊಳೆ ರಸ್ತೆಯಿಂದ ಬಂಡೀಪುರಕ್ಕೆ ವಾಪಸಾಗುತ್ತಿರುವುದು ಲಾರಿಗಳ ಚಾಲಕರು ಹಾಗೂ ಅರಣ್ಯ ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಯಾವ ಕ್ಷಣದಲ್ಲಿ ಆನೆ ಎದುರಾಗುತ್ತದೋ ಎಂಬ ಆತಂಕದಿಂದಲೇ ಚಾಲಕರು ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗಾಗಿ ಕಾಡಾನೆಯ ಈ ಹಿಂದೆ ಎಲ್ಲಿತ್ತು. ಎಲ್ಲೆಲ್ಲಿ ದಾಳಿ ಮಾಡಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಏಕಾಏಕಿ ರಸ್ತೆಗೆ ಇಳಿಯುವ ಆನೆ ನಡುರಸ್ತೆಯಲ್ಲಿ ಸಾಗುವ ಮೂಲಕ ವಾಹನಗಳು ಮುಂದೆ ಸಾಗದಂತೆ ಮಾಡುತ್ತಿದೆ. ತಮ್ಮತ್ತಲೇ ನೇರವಾಗಿ ಮುನ್ನುಗ್ಗಿ ಬರುವ ಆನೆಯನ್ನು ಕಂಡು ಚಾಲಕರು ಗಲಿಬಿಲಿಯಾಗುತ್ತಿದ್ದಾರೆ. ಆನೆಯಿಂದ ಪಾರಾಗಲು ರಿವರ್ಸ್ ಸಾಗುವ ಟೆಂಪೋಗಳನ್ನು ಅಟ್ಟಿಸಿಕೊಂಡು ಬರುವ ಸಲಗ, ದಂತದಿಂದ ಹಗ್ಗವನ್ನು ಕಿತ್ತುಹಾಕುವ ರಭಸಕ್ಕೆ ವಾಹನಗಳು ಜೋರಾಗಿ ಅಲುಗಾಡುತ್ತವೆ. ಇದರಿಂದ ಟೆಂಪೋ ಮಗುಚಿಕೊಳ್ಳುವ ಭೀತಿಯಿಂದ ಚಾಲಕರು ಆತಂಕಕ್ಕೊಳಗಾಗುತ್ತಿದ್ದಾರೆ.

ಬೆಳಗ್ಗೆ 6 ಗಂಟೆಗೆ ಚೆಕ್ ಪೋಸ್ಟ್ ತೆರೆದು ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಾ ಆನೆಯನ್ನು ರಸ್ತೆಗೆ ಬರದಂತೆ ಕಾಡಿಗೆ ಅಟ್ಟಿದರೂ ಚಾಲಾಕಿ ಆನೆ ಮತ್ತೊಂದು ಕಡೆಯಿಂದ ಬರುತ್ತಿದೆ. ಎಲ್ಲಿ ಆನೆ ದಾಳಿ ಮಾಡುವುದೋ ಎಂಬ ಆತಂಕದಿಂದಲೇ ಚಾಲಕರು ವಾಹನ ಚಲಾಯಿಸುತ್ತಿದ್ದಾರೆ. ಈ ಆನೆಯನ್ನು ಚಾಲಕರು ಬಂಡೀಪುರ ಟ್ಯಾಕ್ಸ್ ಕಲೆಕ್ಟರ್ ಎಂದು ಕರೆಯುತ್ತಿದ್ದರೆ, ತರಕಾರಿ ಟೆಂಪೋಗಳ ಚಾಲಕರು ತರಕಾರಿ ರಾಜ ಎಂದು ನಾಮಕರಣ ಮಾಡಿದ್ದಾರೆ. ಹಾಗಾಗಿ ಆನೆ ಸೆರೆ ಹಿಡಿದು ಬೇರೆಡಿ ಬಿಡುವಂತೆ ಸಾರ್ವಜನಿಕರಿಂದ ಒತ್ತಾಯವೂ ಕೇಳಿ ಬಂದಿದೆ.