ಮಂಗಲ ಗ್ರಾಮದಲ್ಲಿ ಶ್ರೀ ಭಗತ್‌ಸಿಂಗ್ ಯುವಕರ ಸ್ವಸಹಾಯ ಸಂಘದ ನಾಮಫಲಕವನ್ನು ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಕೃಷ್ಣ, ಬಾಗಳಿ ರೇವಣ್ಣ ಇತರರಿದ್ದರು.  
ಚಾಮರಾಜನಗರ

ಗ್ರಾಮೀಣ ಜನರಿಗೆ ಉಳಿತಾಯ ಮನೋಭಾವ ಅತ್ಯಗತ್ಯ

ಯಳಂದೂರು : ಗ್ರಾಮೀಣ ಪ್ರದೇಶದಲ್ಲಿ ಸಂಘದ ಸ್ಥಾಪನೆಗಿಂತ ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವ ಮೂಲಕ ಸದಸ್ಯರ ಆರ್ಥಿಕ ಮಟ್ಟವನ್ನು ಅಭಿವೃದ್ಧಿಪಡಿಸಿ ಮಾದರಿಯನ್ನಾಗಿಸಬೇಕು ಎಂದು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶ್ರೀ ಭಗತ್ ಸಿಂಗ್ ಯುವಕರ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಸುಧಾರಣೆಗೊಳ್ಳಬೇಕಾದರೆ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದುಡಿಮೆಯಲ್ಲಿ ಶೇ.10 ರಷ್ಟನ್ನು ಉಳಿತಾಯಕ್ಕೆ ಮೀಸಲಿಡುವ ಸಂಕಲ್ಪ ಮಾಡಬೇಕು. ಸಂಘ-ಸಂಸ್ಥ್ಥೆಯನ್ನು ಸ್ಥಾಪನೆ ಮಾಡುವುದಷ್ಟೇ ಅಲ್ಲ. ಬದಲಾಗಿ ಆ ಸಂಘದ ನೀತಿ, ನಿಯಮಗಳನ್ನು ಪಾಲಿಸುವಂತಾಗಬೇಕು. ಸಭೆ, ಸಮಾರಂಭ, ಸಾಲ ಸೌಲಭ್ಯ, ಉಳಿತಾಯ ಸೇರಿದಂತೆ ಸರ್ಕಾರದ ಕೆಲಸವನ್ನು ಕ್ರಮ ಬದ್ಧವಾಗಿ ಮಾಡಿ ನಿರಂತರವಾಗಿ ಮುನ್ನಡೆಸುವ ಉದ್ದೇಶ ಹೊಂದಿರಬೇಕು ಎಂದು ಪ್ರತಿಪಾದಿಸಿದರು.
ಉಪ್ಪಾರ ಸಮಾಜ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಪ್ರತಿ ಗ್ರಾಮ ಮಟ್ಟದಲ್ಲೂ ಸ್ವಸಹಾಯ ಸಂಘವನ್ನು ಸ್ಥಾಪನೆಗೆ ಮುಂದಾಗಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಆ ಮೂಲಕ ಉಳಿತಾಯ ಮಾಡಿ ಸಾಲ ಸೌಲಭ್ಯ ಪಡೆದುಕೊಂಡು ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಸಂತೇಮರಹಳ್ಳಿ ಪೊಲೀಸ್ ಠಾಣೆ ಎಎಸ್‌ಐ ಮಂಜುನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಸಾಂಸ್ಕೃತಿಕ, ಕ್ರೀಡಾ ಸೇರಿದಂತೆ ಇತರ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಿಳಿಸಿದರು.
ಭಗತ್ ಸಿಂಗ್ ಸಂಘದ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರಾಗಿ ಶಶಿ, ಕಾರ್ಯದರ್ಶಿಯಾಗಿ ಸೋಮಣ್ಣ, ಖಜಾಂಚಿಯಾಗಿ ಅಣ್ಣಪ್ಪಸ್ವಾಮಿ, ಸದಸ್ಯರಾಗಿ ಹೊನ್ನಯ್ಯ, ಶಿವಶೆಟ್ಟಿ, ಮಂಜುನಾಥ್, ದೇವರಾಜು, ನಂಜೇಶ್, ಎನ್.ಮಹೇಶ್, ಆರ್.ಜಯಕುಮಾರ್, ಆರ್.ಮಹೇಶ್ ಸೇರಿದಂತೆ ಇತರರು ಆಯ್ಕೆಯಾದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅಣ್ಣಪ್ಪಸ್ವಾಮಿ, ಎಂ.ಶಿವಣ್ಣ, 88 ಗಡಿಮನೆ ಯಜಮಾನ ಕೃಷ್ಣ , ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಬಾಗಳಿ ರೇವಣ್ಣ, ಯಜಮಾನರಾದ ದೊರೆಸ್ವಾಮಿ, ಲಕ್ಷಣಶೆಟ್ಟಿ, ನಾರಾಯಣಸ್ವಾಮಿ, ಮಾದಪ್ಪ, ಮಂಗಲ ಕುಮಾರ್, ಕ್ಯಾತಶೆಟ್ಟಿ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಶಿವಣ್ಣ ರಂಗಸ್ವಾಮಿಶೆಟ್ಟಿ ಇತರರು ಹಾಜರಿದ್ದರು.