ಚಾಮರಾಜನಗರ ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಜಾನುವಾರುಗಳನ್ನು ಕಿಚ್ಚು ಹಾಯಿಸಿದರು. 
ಚಾಮರಾಜನಗರ

ಸಂಕ್ರಾಂತಿ ಸುಗ್ಗಿ ಸಂಭ್ರಮದ ಹಬ್ಬ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಪಣ್ಯದಹುಂಡಿಯಲ್ಲಿ ದನ-ಕರುಗಳಿಗೆ ಕಿಚ್ಚು ಹಾಯಿಸಿದ ಗ್ರಾಮಸ್ಥರು
  • ದೇಗುಲಗಳಲ್ಲಿ ಭಕ್ತರ ದಂಡು ವಿಶೇಷ ಪೂಜೆ ಸಲ್ಲಿಕೆ
ಚಾಮರಾಜನಗರ: ಸಮೃದ್ಧಿಯ ಸಂಕೇತವಾಗಿರುವ ಸಂಕ್ರಾಂತಿ ಹಬ್ಬವನ್ನು ಜಿಲ್ಲಾದ್ಯಂತ ಗುರುವಾರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕುಗಳಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ದೇಗುಲಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ ಭಕ್ತರು ದೇವರಿಗೆ ವಿಶೇಷ ಪೂಜೆ, ಅರ್ಚನೆ, ಧೂಪ-ದೀಪ ಹಾಕಿ ಪ್ರಾರ್ಥನೆ ಸಲ್ಲಿಸಿದರು. ದೇಗುಲಗ ಹೊರಗೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಖುಷಿ ಹಂಚಿಕೊಂಡರು. ಮನೆಗಳಲ್ಲಿ ಹಬ್ಬದೂಟದ ಘಮಲು ಹರಿಯಿತು. ಮಕ್ಕಳು ಎಳ್ಳು ಬೆಲ್ಲ ಹಂಚಿ ಸಂತೋಷಪಟ್ಟರು.
ದೇಗುಲಗಳಿಗೆ ಭಕ್ತರ ದಂಡು:
ಜಿಲ್ಲಾಕೇಂದ್ರ ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ವೀರಭದ್ರೇಶ್ವರ ಸ್ವಾಮಿ ದೇಗುಲ, ರಾಮಸಮುದ್ರದ ಹರಳಕೋಟೆ ಆಂಜನೇಯ ಸ್ವಾಮಿ ಸನ್ನಿಧಿ ಮತ್ತು ಇನ್ನಿತರೆ ಕಡೆಗಳಲ್ಲಿ ಭಕ್ತರ ದಂಡು ಹರಿದುಬಂತು. ಹಬ್ಬದ ಪ್ರಯುಕ್ತ ದೇವರ ಮೂರ್ತಿಗೆ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಪಣ್ಯದಹುಂಡಿಯಲ್ಲಿ ಕಿಚ್ಚು ಹಾಯ್ದ ಜಾನುವಾರು:
ಸಂಕ್ರಾಂತಿ ಎಂದರೆ ಜಾನುವಾರುಗಳಿಗೆ ಕಿಚ್ಚು ಹಾಯಿಸುವ ಹಬ್ಬ. ತಾಲೂಕಿನ ಪಣ್ಯದಹುಂಡಿ ಗ್ರಾಮದಲ್ಲಿ ರೈತರು ಜಾನುವಾರುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಗ್ರಾಮದ ಮಾರಮ್ಮನ ದೇವಸ್ಥಾನದ ಬಳಿ ರೈತರು ಜಾನುವಾರುಗಳನ್ನು ತಂದು ಗುಂಪುಗೂಡಿದರು. ಈ ವೇಳೆ ಮುಖಂಡರಾದ ಶಿವಣ್ಣ ಅವರ ಮನೆಯಿಂದ ಪೂಜೆ ಸಲ್ಲಿಕೆ ಮಾಡಲಾಯಿತು. ಬಳಿಕ ಗ್ರಾಮಸ್ಥರು ಜಾನುವಾರುಗಳನ್ನು ಕಿಚ್ಚು ಹಾಯಿಸಿದರು. ಯುವಕರ ಗುಂಪು ದನ, ಹಸು, ಕರುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಮನೆಗಳಲ್ಲಿ ವಿಶೇಷ ಅಡುಗೆ ಮಾಡಿ ಸವಿದ ಗ್ರಾಮಸ್ಥರು ಅಚ್ಚುಕಟ್ಟಾಗಿ ಹಬ್ಬ ಆಚರಣೆ ಮಾಡಿದರು.
ಕುಂಬೇಶ್ವರ ಕಾಲನಿಯಲ್ಲಿ ಸುಗ್ಗಿ ಜಾತ್ರೆ:
ತಾಲೂಕಿನ ಕುಂಬೇಶ್ವರ ಕಾಲನಿಯಲ್ಲಿ ಸಂಕ್ರಾಂತಿ ಹಬ್ಬದ ಸುಗ್ಗಿ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಕರಡಿಹಳ್ಳದಲ್ಲಿರುವ ಕುಂಬೇಶ್ವರ ಸ್ವಾಮಿ ದೇಗುಲದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೇವರ ಮೂರ್ತಿಯನ್ನು ಸುವರ್ಣಾವತಿ ಹೊಳೆಯ ನೀರಿನಿಂದ ಅಭಿಷೇಕ ಹುಲಿವಾಹನದಲ್ಲಿ ಸತ್ತಿಗೆ, ಡೊಳ್ಳು ಕುಣಿತ, ವೀರಭದ್ರ ಕುಣಿತ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಜಾತ್ರೆಯಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಪಣ್ಯದಹುಂಡಿ ಗ್ರಾಮದಲ್ಲಿ ಸಡಗರದಿಂದ ಸಂಕ್ರಾಂತಿ ಆಚರಣೆ ಮಾಡಲಾಯಿತು. ಹಿರಿಯರು ಅನುಸರಿಸುತ್ತಿರುವ ಸಂಪ್ರದಾಯದಂತೆ ಜಾನುವಾರುಗಳನ್ನು ಕಿಚ್ಚು ಹಾಯಿಸಿ ಹಬ್ಬ ಮಾಡಲಾಯಿತು.
-ಶಿವಲಿಂಗೇಗೌಡ, ಪಣ್ಯದಹುಂಡಿ ಗ್ರಾಮಸ್ಥ, ಇಕ್ರಾ ಸಂಸ್ಥೆ ಕಾರ್ಯಕರ್ತ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎಳ್ಳು ಬೆಲ್ಲ ಹಂಚಲು ಕಾತುರದಿಂದ ಕಾಯುತ್ತಿದ್ದೆ. ಹಬ್ಬದ ದಿನ
ನಮ್ಮ ಮನೆಯ ಅಕ್ಕ-ಪಕ್ಕದವರು, ಸ್ನೇಹಿತರಿಗೆ ಎಳ್ಳು ಬೆಲ್ಲ ಹಂಚಿದ್ದು ಖುಷಿಯಾಗಿದೆ.
-ಭೂಮಿಕಾ, ಶೇಷಾದ್ರಿ ಬಡಾವಣೆ, ಗುಂಡ್ಲುಪೇಟೆ