ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಫಾರಿಯಲ್ಲಿ ಪ್ರವಾಸಿಗರ ಕಣ್ಣಿಗೆ ಬಿದ್ದ ಆನೆಗಳ ಹಿಂಡು ಹಾಗೂ ಹುಲಿ.  
ಚಾಮರಾಜನಗರ

ಸಫಾರಿಗೆ ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ

ಗುಂಡ್ಲುಪೇಟೆ: ಬಂಡೀಪುರದಲ್ಲಿ ಬಂದ್ ಆಗಿದ್ದ ಸಫಾರಿ ಪುನರಾರಂಭಿಸಿದ ಎರಡನೇ ದಿನವೂ ಪ್ರವಾಸಿಗರಿಂದ ಹೆಚ್ಚಿನ ಪ್ರತಿಕ್ರಿಯೆ ದೊರಕಿದೆ.
ಕಚೇರಿಗಳು ಆರಂಭವಾದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಸ್ವಲ್ಪಮಟ್ಟಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಒಂದು ಬಸ್ ಹಾಗೂ ಎರಡು ಕ್ಯಾಂಪೈರ್‌ಗಳಲ್ಲಿ ಸಫಾರಿಗೆ ಹೋಗಿಬಂದರು. ಮಧ್ಯಾಹ್ನ ಸ್ವಲ್ಪ ಮಟ್ಟಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರಿಂದ ಬಸ್‌ಗಳನ್ನು ಕಳಿಸಲಾಯಿತು.
ಪ್ರವಾಸಿಗರಿಗೆ ಎಲ್ಲ ಕಡೆಗಳಲ್ಲಿಯೂ ಹೇರಳವಾಗಿ ಆನೆಗಳ ಹಿಂಡು ಕಾಣಿಸಿವೆ. ಒಂದು ವಾಹನದ ಪ್ರವಾಸಿಗರಿಗೆ ಎರಡು ಹುಲಿಗಳು ಹಾಗೂ ಒಂದು ಚಿರತೆ ದರ್ಶನ ನೀಡಿವೆ. ತಾವು ಸಫಾರಿಗೆ ಹೋಗಿದ್ದ ಸಂದರ್ಭದಲ್ಲಿ ಕಂಡುಬಂದ ವನ್ಯಜೀವಿಗಳ ಫೋಟೋ ಜತೆಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.
ಮುಂದುವರಿದ ಪೊಲೀಸ್ ಬಂದೋಬಸ್ತ್: ರೈತ ಸಂಘಟನೆಯವರು ಯಾವುದೇ ಕ್ಷಣದಲ್ಲಿಯಾದರೂ ಮುತ್ತಿಗೆಹಾಕುವ ಶಂಕೆಯಿರುವ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಬಳಿ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಸಹಜವಾಗುವವರೆಗೆ ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೂ ಪೊಲೀಸರ ಕಣ್ಗಾವಲು ಇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬ್ಬಂದಿ ಮುಖದಲ್ಲಿ ಮರಳಿದ ಲವಲವಿಕೆ: ಸಫಾರಿ ಬಂದ್ ಆಗಿದ್ದ ನಂತರ ಅತಂತ್ರರಾಗಿದ್ದ ವಾಹನ ಚಾಲಕರು, ಗೈಡ್‌ಗಳು, ನ್ಯಾಚುರಲಿಸ್ಟ್‌ಗಳ ಮುಖದಲ್ಲಿ ಸಫಾರಿ ಪುನರಾರಂಭಗೊಂಡ ನಂತರ ಲವಲವಿಕೆ ಮರುಕಳಿಸಿದೆ. ಸಫಾರಿ ಡ್ರೆಸ್ ಕೋಡ್‌ನಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೌಂಟರ್ ಸಮೀಪವಿರುವ ಮಳಿಗೆಗಳಲ್ಲಿ ಪ್ರವಾಸಿಗರು ಹುಲಿ, ಆನೆ, ಚಿರತೆಗಳ ಚಿತ್ರಗಳಿರುವ ಟಿ-ಶರ್ಟ್, ಪ್ಯಾಂಟ್‌ಗಳನ್ನು ಖರೀದಿಸುತ್ತಿದ್ದಾರೆ.