ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಸೋಮವಾರ ಕಾಣಿಸಿಕೊಂಡ ಮೂರ್ಕೆರೆ ಫೀಮೇಲ್ ಮರಿಗಳು ಹಾಗೂ ಕೇತಹಳ್ಳಿ ಫೀಮೇಲ್ ಮತ್ತು ಮರಿಗಳಿವೆ.
ಗುಂಡ್ಲುಪೇಟೆ :ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಸೋಮವಾರ ಬೆಳಗ್ಗೆ ಕಿರುಬನ ಕೊಳಚಿ ಕೆರೆಯಲ್ಲಿ ಒಂದು ದೊಡ್ಡಹುಲಿ ಮತ್ತು ಐದು ಮರಿಗಳು ಕಾಣಿಸಿಕೊಂಡಿವೆ. ಕಳೆದ ವರ್ಷ ತಾಯಿ ಕಣ್ಮರೆಯಾದ ನಂತರ ಹೊರಗೆ ಕಾಣಿಸದೆ ಕಾಡಿನೊಳಗೇ ಇದ್ದ ಮೂರು ಮರಿಗಳು ಇದೇ ಮೊದಲಬಾರಿಗೆ ಹೊರಗೆ ಕಾಣಿಸಿಕೊಂಡಿರುವುದು ಪ್ರವಾಸಿಗರಿಗೆ ಪುಳಕ ಉಂಟುಮಾಡಿದೆ.
ಕಳೆದ ನವೆಂಬರ್‌ನಲ್ಲಿ ಸಫಾರಿ ಬಂದ್ ಆಗಿದ್ದರಿಂದ ಯಾವುದೇ ವಾಹನಗಳ ಓಡಾಟವಿಲ್ಲದೆ ಸ್ವಚ್ಛಂದ ವಾಗಿದ್ದ ವನ್ಯ ಜೀವಿಗಳು ಸಫಾರಿ ಆರಂಭವಾದ ನಂತರ ಪ್ರವಾಸಿಗರಿಗೆ ದರ್ಶನ ನೀಡುತ್ತಿವೆ. ಸೋಮವಾರ ಬೆಳಗ್ಗೆ ಸಫಾರಿ ಸಂದರ್ಭದಲ್ಲಿ ಕೇತಳ್ಳಿ ಕೆರೆ ಫೀಮೇಲ್ ತನ್ನ ಎರಡು ಮರಿಗಳ ಜತೆ ಮಲಗಿರುವುದು ಹಾಗೂ ಅದೇ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಮೂರ್ಕೆರೆ ಫೀಮೇಲ್‌ನ ಮೂರು ಮರಿಗಳು ಕಾಡಿನತ್ತ ಓಡಿಹೋದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಅರಣ್ಯ ಇಲಾಖೆಯ ಪಾಲನೆಯಲ್ಲಿ ಬೆಳೆದ ಮರಿಗಳು:
ಕಳೆದ ವರ್ಷ ತನ್ನ ಮೂರು ಮರಿಗಳ ಜತೆಗೆ ಪ್ರವಾಸಿಗರಿಗೆ ಧಂಡಿಯಾಗಿ ದರ್ಶನ ನೀಡುತ್ತಿದ್ದ ಮೂರ್ಕೆರೆ ಫೀಮೇಲ್ ಹೆಸರಿನ ಹೆಣ್ಣುಹುಲಿ ಅಕ್ಟೋಬರ್ ತಿಂಗಳಿನಲ್ಲಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಎಡ ಕಾಲಿಗೆ ಆದ ಗಾಯದಿಂದ ಕುಂಟುತ್ತಿದ್ದ ತಾಯಿ ತನ್ನ 10 ತಿಂಗಳ ಮರಿಗಳನ್ನು ತೊರೆದುಹೋಗಿತ್ತು. ಅರಣ್ಯ ಇಲಾಖೆ ಎಷ್ಟೇ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಅದು ಬದುಕಿದೆಯೋ ಸತ್ತಿದೆಯೇ ಎಂಬುದೇ ತಿಳಿಯದಂತಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮರಿಗಳ ರಕ್ಷಣೆ ಹಾಗೂ ಪಾಲನೆಗೆ ಮುಂದಾಗಿತ್ತು.
ಇನ್ನೂ ಬೇಟೆಯಾಡುವ ಕೌಶಲ ಕಲಿಯದೆ ತಮ್ಮ ಆಹಾರವನ್ನು ಸಂಪಾದಿಸಲು ಸಾಧ್ಯವಾಗದೆ ಅನಾಥವಾಗಿದ್ದ ಮರಿಗಳಿಗೆ ಆಹಾರ ನೀಡುವ ವ್ಯವಸ್ಥೆ ಮಾಡಿತ್ತು. ಜತೆಗೆ ಕಾಡಿನಲ್ಲಿರುವ ಇತರ ಹುಲಿ ಚಿರತೆಗಳಿಂದ ಅಪಾಯವಾಗದಂತೆ ಥರ್ಮಲ್ ಡ್ರೋಣ್ ಕ್ಯಾಮರಾಗಳ ಮೂಲಕ ಕಣ್ಗಾವಲಿರಿಸಿ ಸಂರಕ್ಷಿಸಿತ್ತು. ನಿಧಾನಕ್ಕೆ ಬೆಳೆಯುತ್ತಾ ಬಂದ ಮರಿಗಳಿಗೆ ಸದ್ಯ ಒಂದೂವರೆ ವರ್ಷ ವಯಸ್ಸಾಗಿದ್ದು ಇವು ಸ್ವಂತವಾಗಿ ಬೇಟೆಯಾಡುವ ಸಾಮರ್ಥ್ಯ ಬೆಳೆಸಿಕೊಂಡಿವೆ. ಜಿಂಕೆಗಳನ್ನು ಬೇಟೆಯಾಡಿ ತಿನ್ನುತ್ತಿವೆ.
ಇದೇ ಮೊದಲಬಾರಿಗೆ ಮೂರ್ಕೆರೆ ಫೀಮೇಲ್‌ನ ಮೂರು ಮರಿಗಳು ಹಾಗೂ ಕೇತಹಳ್ಳಿ ಕೆರೆ ಫೀಮೇಲ್ ಮರಿಗಳು ಒಟ್ಟಾಗಿ ಕಿರುಬನ ಕೊಳಚಿಯಲ್ಲಿ ಕಾಣಿಸಿಕೊಂಡಿವೆ. ತಾಯಿಯಿಲ್ಲದೆ ಅನಾಥವಾಗಿದ್ದ ಮೂರು ಮರಿಗಳು ತಮ್ಮ ಬೇಟೆಯನ್ನು ಸಂಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿವೆ.