ಗುಂಡ್ಲುಪೇಟೆ ಪಟ್ಟಣದ ನೆಹರು ಪಾರ್ಕ್ ಬಳಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವವನ್ನು ಶಂಕರಾನಂದ ಉದ್ಘಾಟಿಸಿದರು. ಷಡಕ್ಷರ ಸ್ವಾಮೀಜಿ, ರಾಜೇಶ್ವರಿ ಚಂದ್ರಶೇಖರ್, ಗೋಪಾಲಕೃಷ್ಣ ಭಟ್ಟ, ಪ್ರಕಾಶ್ ಇದ್ದರು. 
ಚಾಮರಾಜನಗರ

ಗುಲಾಮಿ ಮಾನಸಿಕತೆ ತೊಡೆದು ಹಾಕಲು ಆರ್‌ಎಸ್‌ಎಸ್ ಯತ್ನ

ಪ್ರಮುಖ ಮುಖ್ಯಾಂಶಗಳು

  • ನಾಗಪುರದ ಕೇಂದ್ರದ ರಾಷ್ಟ್ರೀಯ ಶಿಕ್ಷಣ ಮಂಡಲದ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಂಕರಾನಂದ
  • ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸ
ಗುಂಡ್ಲುಪೇಟೆ: ದೇಶದ ಜನರಲ್ಲಿನ ಗುಲಾಮಿ ಮಾನಸಿಕತೆಯನ್ನು ತೆಗೆದು ಹಾಕಲು ಆರ್‌ಎಸ್‌ಎಸ್ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ನಾಗಪುರದ ಕೇಂದ್ರದ ರಾಷ್ಟ್ರೀಯ ಶಿಕ್ಷಣ ಮಂಡಲದ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಂಕರಾನಂದ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಸೋಮವಾರ ಪಟ್ಟಣದ ನೆಹರು ಪಾರ್ಕ್ ಬಳಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷಗಳಾದರೂ ನಾವಿನ್ನೂ ಬ್ರಿಟಿಷ್ ಕಾಲದ ಗುಲಾಮಗಿರಿಯ ಮನಸ್ಥಿತಿಯಲ್ಲಿದ್ದೇವೆ. ರಾಷ್ಟ್ರೀಯ ಸ್ವಯಂಸೇವಾ ಸಂಘ ಶತಮಾನದ ಹರೆಯದಲ್ಲಿದ್ದು, ಭಾರತ ತನ್ನ ಸ್ವಾತಂತ್ರೃದ ಶತಮಾನೋತ್ಸವವನ್ನು 2047ಕ್ಕೆ ಆಚರಿಸಿಕೊಳ್ಳುತ್ತದೆ. ಈ ಎರಡರ ಮಧ್ಯೆ 21 ವರ್ಷಗಳ ಕಾಲಾವಧಿಯಲ್ಲಿ ದೇಶದ ಜನರ ಗುಲಾಮಿ ಮಾನಸಿಕತೆಯನ್ನು ತೆಗೆದು ಹಾಕಲು ಹಿಂದೂ ಸಮಾಜ ಬದ್ಧವಾಗಬೇಕಾಗಿದೆ ಎಂದರು.
ಮನೆ, ಶಿಕ್ಷಣ ಕೇಂದ್ರಗಳು, ಮಠ ಮಂದಿರ, ಪ್ರಾರ್ಥನಾ ಸ್ಥಳಗಳಲ್ಲಿ ದೇಶೀಯತೆ ತರಬೇಕಾಗಿದೆ. ಮನೆಯಲ್ಲಿ ಸಂಸ್ಕಾರ ಕಲಿಸುವ ಮೂಲಕ ದೇಶೀಯ ಆಹಾರ ವಿಹಾರಗಳ ಜೀವನಶೈಲಿ ನಮ್ಮದಾಗಿಸಬೇಕಿದೆ. ಪರಿಸರ ಸಂರಕ್ಷಣೆ, ಹಿಂದೂ ಸಮಾಜದ ಪಿಡುಗಾಗಿರುವ ಅಸ್ಪೃಶ್ಯತೆಯನ್ನು ಬೇರುಸಹಿತ ಕಿತ್ತುಹಾಕುವ ಬದ್ಧತೆ ನಮ್ಮದಾಗಬೇಕು ಎಂದು ಹೇಳಿದರು.
ಸಂವಿಧಾನದ ಘನತೆ ಎತ್ತಿ ಹಿಡಿಯುವಂತೆ ಕಾನೂನುಗಳನ್ನು ಗೌರವಿಸುವ ಜವಾಬ್ದಾರಿ ನಮ್ಮದಾಗಿದೆ. ಸಂಘ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯದಲ್ಲಿ ತೊಡಗಿದವರೊಂದಿಗೆ ಕೈಜೋಡಿಸುತ್ತ ಪಂಚ ಪರಿವರ್ತನೆಗಳ ಬಗ್ಗೆ ಸಂಕಲ್ಪ ಮಾಡಿದೆ. ದೇಹ, ದೇಶವನ್ನು ದೇವರೆಂದು ಭಾವಿಸಿ ಸಮರ್ಪಿಸಿಕೊಂಡಾಗ ಸ್ವಯಂದೇಹವೇ ದೇವರಾಗುತ್ತದೆ. ದೇಶಕ್ಕಾಗಿ ಬದುಕುವ ಸಂಕಲ್ಪ ಮಾಡೋಣ ಎಂದು ಹೇಳಿದರು.
ಇದಕ್ಕೂ ಮೊದಲು ವೀರಯೋಧ ಶಿವಾನಂದ ವೃತ್ತದಿಂದ ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಮಾರ್ಗವಾಗಿ ನೆಹರು ಪಾರ್ಕ್‌ವರೆಗೆ ನಂದಿಧ್ವಜ, ಮಂಗಳವಾದ್ಯಗಳೊಂದಿಗೆ ಭಾರತಮಾತೆಯ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಂಗಳ ಪಟ್ಟದ ಮಠದ ಷಡಕ್ಷರ ಸ್ವಾಮೀಜಿ, ರಾಘವೇಂದ್ರಮಠದ ರಾಜೇಶ್ವರಿ ಚಂದ್ರಶೇಖರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ಟ, ಕೃಷಿಕ ಪ್ರಕಾಶ್ ಸೇರಿದಂತೆ ಸಾವಿರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದ್ದರು.