ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. 
ಚಾಮರಾಜನಗರ

ಬಿಳಿಗಿರಿರಂಗನ ಹುಂಡಿಯಲ್ಲಿ 9.86 ಲಕ್ಷ ರೂ. ಸಂಗ್ರಹ

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀ ರಂಗನಾಥಸ್ವಾಮಿ ದೇಗುಲದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ಮಾಡಲಾಯಿತು. ಒಟ್ಟು 9, 86,386 ಲಕ್ಷ ರೂ. ಕಾಣಿಕೆ ಸಂಗ್ರಹವಾಯಿತು.
9,25,126 ರೂ. ನೋಟುಗಳ ರೂಪದಲ್ಲಿ ಕಾಣಿಕೆ ಸಂಗ್ರಹವಾದರೆ 61,260 ರೂ. ನಾಣ್ಯ ಸಂಗ್ರಹವಾಗಿದೆ. ಇದರೊಂದಿಗೆ ಒಂದು ಚಿನ್ನದ ಕಾಸು, ಒಂದು ಮಾಂಗಲ್ಯದ ಬೊಟ್ಟು ಹಾಗೂ ಒಂದು ಜತೆ ಬೆಳ್ಳಿಯ ಹರಕೆ ಕಣ್ಣುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಮಾಹಿತಿ ನೀಡಿದ್ದಾರೆ.
ಕಂದಾಯ ಇಲಾಖೆ, ದೇಗುಲದ ಸಿಬ್ಬಂದಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಈ ಹಿಂದೆ ಫೆ.9ರಂದು ಹುಂಡಿಗಳ ಹಣ ಎಣಿಕೆ ಮಾಡಲಾಗಿತ್ತು. ಇದಾದ ಬಳಿಕ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ಹುಂಡಿಯ ಹಣ ಎಣಿಕೆ ಕಾರ್ಯ ನಡೆಯಿತು.
ಹುಂಡಿಯ ಹಣ ಎಣಿಕೆ ವೇಳೆ ಬಿಳಿಗಿರಿರಂಗನಾಥಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗುಂಬಳ್ಳಿ ರಾಜಣ್ಣ, ಸಿದ್ದರಾಜು, ನಾರಾಯಣಸ್ವಾಮಿ, ಕೇತಮ್ಮ, ಸುರೇಶ್, ಪಾರುಪತ್ತೇದಾರ ರಾಜು, ರಜಸ್ವ ನಿರೀಕ್ಷಕ ಯದುಗಿರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕ ವೀರಭದ್ರಸ್ವಾಮಿ, ಶೇಷಾದ್ರಿ, ಅರ್ಚಕರಾದ ರವಿಕುಮಾರ್, ಶ್ರೀನಿವಾಸ್ ಇತರರು ಇದ್ದರು.