ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಪಿಡಿಒ ಡಿ.ಶಿವಕುಮಾರ್ ಮಾತನಾಡಿದರು. ಅಧ್ಯಕ್ಷೆ ಲಾವಣ್ಯ ಕುಮಾರ್ ಇತರರು ಇದ್ದರು.
- ಯರಿಯೂರು ಗ್ರಾಪಂ ಪಿಡಿಒ ಡಿ.ಶಿವಕುಮಾರ್ ಮಾಹಿತಿ
- ಲೆಕ್ಕತಪಾಸಣೆ ಗ್ರಾಮಸಭೆ
ಯಳಂದೂರು: ಯರಿಯೂರು ಗ್ರಾಮ ಪಂಚಾಯಿತಿಯಲ್ಲಿ 2025-26ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ 3.16 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಗ್ರಾಪಂ ಪಿಡಿಒ ಡಿ.ಶಿವಕುಮಾರ್ ಹೇಳಿದರು.
ಯರಿಯೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುದ ಬಳಿ ಗ್ರಾಪಂ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ನರೇಗಾ ಲೆಕ್ಕತಪಾಸಣೆ ಹಾಗೂ 2025-26 ನೇ ಸಾಲಿನ ನರೇಗಾ ಕ್ರಿಯಾಯೋಜನೆ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 204 ಕಾಮಗಾರಿಗಳನ್ನು ಮಾಡಲಾಗಿದೆ. ಇದರಲ್ಲಿ ಗ್ರಾಮ ಪಂಚಾಯಿತಿಯ 198, ತೋಟಗಾರಿಕೆ ಇಲಾಖೆಯ 4 ಹಾಗೂ ಅರಣ್ಯ ಇಲಾಖೆಯ 2 ಕಾಮಗಾರಿಗಳು ಸೇರಿವೆ. ಕೂಲಿ ಮೊತ್ತವಾಗಿ 1.47 ಕೋಟಿ ರೂ. ಹಾಗೂ ಸಾಮಗ್ರಿಗೆ 33.78 ಲಕ್ಷ ರೂ. ಸೇರಿದಂತೆ ಒಟ್ಟು 1.81 ಕೋಟಿ ರೂ. ಹಣವನ್ನು ವ್ಯಯಿಸಲಾಗಿದೆ. ಇದರಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯರಿಯೂರು, ಗಣಿಗನೂರು, ಚಾಮಲಾಪುರ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮುಂದಿನ ಸಾಲಿನಲ್ಲಿ 3.16 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯರಿಯೂರು ಗ್ರಾಮ ಪಂಚಾಯಿತಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕಾವೇರಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಪಂಚಾಯತ್ ರಾಜ್ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಜೆಇ ಮಾನಸ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಲ ಗ್ರಾಮಗಳಿಗೆ ಈ ಸಮಸ್ಯೆ ಇದೆ. ಯಳಂದೂರು ಪಟ್ಟಣಕ್ಕೆ ಪೂರೈಕೆಯಾಗುವ ಕಾವೇರಿ ನೀರು ಇಲ್ಲಿಗೆ ಕೊಡಬೇಕೆಂದು ಈ ಹಿಂದೆ ಒಡಂಬಡಿಕೆಯಾಗಿತ್ತು. ಆದರೆ ಈಗ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಇಲ್ಲಿಗೆ ಪ್ರತ್ಯೇಕವಾಗಿ ಪೈಪ್‌ಲೈನ್ ಇರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿಗೆ ನೇರವಾಗಿ ಕಾವೇರಿ ನೀರು ಪೂರೈಕೆ ಮಾಡಬೇಕೆಂಬ ಯೋಜನೆ ರೂಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿಗೆ ನೀರು ಪೂರೈಕೆ ಮಾಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಲಾವಣ್ಯ ಕುಮಾರ್, ಉಪಾಧ್ಯಕ್ಷ ಚಿನ್ನಸ್ವಾಮಿ, ಸದಸ್ಯರಾದ ರಮೇಶ್‌ಗಣಿಗನೂರು, ಮಹದೇವಯ್ಯ, ಕಾರ್ಯದರ್ಶಿ ಸೋಮಣ್ಣ ಪಂಚಾಯತ್ ರಾಜ್ ಇಲಾಖೆಯ ಜೆಇ ಮಹದೇವ, ತೋಟಗಾರಿಕಾ ಇಲಾಖೆಯ ಶಿವರಂಜನಿ, ಸಾಮಾಜಿಕ ಅರಣ್ಯ ಇಲಾಖೆಯ ಲಿಂಗರಾಜು, ಸಮಾಜ ಕಲ್ಯಾಣ ಇಲಾಖೆಯ ನೇತ್ರಾವತಿ ಇತರರು ಇದ್ದರು.