ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ನಡೆಯಿತು. ಎ.ಈ ರಘು, ಚಂದ್ರಶೇಖರ್, ಮರಿಸ್ವಾಮಿ, ಭಾಗ್ಯಮ್ಮ, ಮಹದೇವಪ್ಪ ಇತರರು ಇದ್ದರು.
ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆಯಲ್ಲಿ ಈ ಬಾರಿ 29 ದಿನದ ಅವಧಿಯಲ್ಲಿ 2.48 ಕೋಟಿ ರೂ ಸಂಗ್ರಹವಾಗಿದೆ.
ಬೆಳಗ್ಗೆ 7ರ ವೇಳೆಯಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇಗುಲದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಸಂಗ್ರಹವಾಗಿದ್ದ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಚೀಲದಲ್ಲಿರಿಸಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದ ವಿಶಾಲ ಕೊಠಡಿಗೆ ರವಾನಿಸಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಸೂಕ್ತ ಬಂದೋಬಸ್ತ್ ನೊಂದಿಗೆ ಎಣಿಕೆ ಕಾರ್ಯ ಆರಂಭಿಸಲಾಯಿತು. ಈ ಕಾರ್ಯವು ಸಂಜೆ 6.30ರವರೆಗೂ ನಡೆಯಿತು.
ಈ ಬಾರಿ ಎಳ್ಳಾಮಾವಾಸ್ಯೆ, ಕ್ರಿಸ್‌ಮಸ್, ಹೊಸ ವರ್ಷ ವಾರ‌್ಯಂತ ರಜೆ ಹಾಗೂ ಇನ್ನಿತರೆ ದಿನಗಳಂದು ಮ. ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲ, ದಾಸೋಹ ಭವನ ಸೇರಿದಂತೆ ವಿವಿಧೆಡೆಯಲ್ಲಿ ಇರಿಸಿದ್ದ ಹುಂಡಿಗಳಲ್ಲಿ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹಾಕಿದ್ದರು. ಜತೆಗೆ ಇ ಹುಂಡಿಯ ಮೂಲಕವೂ ಹಣವನ್ನು ಪಾವತಿ ಮಾಡಿದ್ದರು. ನಡೆದ ಹುಂಡಿ ಎಣಿಕೆಯಲ್ಲಿ ಇ ಹುಂಡಿ ಹಣ 7,36,505 ರೂ ಸೇರಿದಂತೆ 2,48,02,179 ರೂ ನಗದು, 35 ಗ್ರಾಂ ಚಿನ್ನ ಹಾಗೂ 1 ಕೆ.ಜಿ 62 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ಬಾರಿ ಡಿ..10 ರಂದು ನಡೆದ ಹುಂಡಿ ಎಣಿಕೆಯಲ್ಲಿ 28 ದಿನದ ಅವಧಿಗೆ 2,53,98,859 ರೂ ನಗದು, 25 ಗ್ರಾಂ ಚಿನ್ನ ಹಾಗೂ 1 ಕೆ.ಜಿ 253 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು.
ಇನ್ನು ಹುಂಡಿಯಲ್ಲಿ ಚಲಾವಣೆಯಲ್ಲಿ ಇಲ್ಲದ 2 ಸಾವಿರ ರೂ ಮುಖ ಬೆಲೆಯ 2 ನೋಟಗಳು ಹಾಗೂ 6 ವಿದೇಶಿ ನೋಟುಗಳು ದೊರೆತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಎಣಿಕೆ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ನಾಮ ನಿರ್ದೇಶಿತ ಸದಸ್ಯರಾದ ಕಾಗಲವಾಡಿಯ ಮರಿಸ್ವಾಮಿ, ಕುಪ್ಯಾದ ಭಾಗ್ಯಮ್ಮ, ಕೀಳನಪುರದ ಮಹದೇವಪ್ಪ, ಮೆಲ್ಲಹಳ್ಳಿಯ ಗಂಗನ ತಿಮ್ಮಯ್ಯ, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಜಿಲ್ಲಾಡಳಿತ ಕಚೇರಿಯ ಮಹೇಶ್ ಚಂದ್ರ, ಕೊಳ್ಳೇಗಾಲ ಬ್ಯಾಂಕ್ ಆಫ್ ಬರೋಡ ನೌಕರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ಭಾಗವಹಿಸಿದ್ದರು.