- ಎಸ್ಪಿ ಎಂ.ಮುತ್ತುರಾಜು ಕ್ರಮ
- ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ
ಚಾಮರಾಜನಗರ: ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುವುದು, ಸೌಹಾರ್ದತೆಯನ್ನು ಭಂಗಗೊಳಿಸುವುದು ಹಾಗೂ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುವುದನ್ನು ತಡೆಗಟ್ಟಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೌಡಿ ನಿಗ್ರಹ ದಳವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು ರಚಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯಾದ್ಯಂತ ರೌಡಿ ಚಟುವಟಿಕೆ ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, 4 ವೃತ್ತ ಮತ್ತು 7 ಪಿ.ಐ. ಪೊಲೀಸ್ ಠಾಣೆಗಳಲ್ಲಿ ರೌಡಿ ನಿಗ್ರಹ ದಳವನ್ನು ರಚನೆ ಮಾಡಲಾಗಿದೆ.
ಈ ದಳವು ರೌಡಿ ಶೀಟರ್‌ಗಳ ಮೇಲೆ ನಿಯಮಿತ ನಿಗಾ ವಹಿಸುವುದು, ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಪದೇ ಪದೇ ಅಶಾಂತಿ ಮೂಡಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸುವುದು, ಮುನ್ನೆಚ್ಚರಿಕಾ ಬಂಧನ, ಗೂಂಡಾ ಕಾಯ್ದೆ, ಕೋಕಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದು, ಬೀಟ್ ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಅಧಿಕಾರಿ ನಿರಂತರ ಸಂಪರ್ಕದಲ್ಲಿರುವುದು, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕಾರ್ಯಚರಣೆ ನಡೆಸುವುದು, ರೌಡಿಗಳ ವಿರುದ್ಧ ವಾರೆಂಟ್, ಬರೆಸಿಕೊಂಡ ಬಾಂಡ್‌ಗಳ ಬಗ್ಗೆ ಪರಿಣಾಮಕಾರಿ ಅನುಷ್ಠಾನ, ಯಾವುದೇ ರೀತಿಯ ಬೆದರಿಕೆ, ಬಲವಂತದ ಹಣ ಸಂಗ್ರಹ, ಗ್ಯಾಂಗ್ ಚಟುವಟಿಕೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುವುದು ತಂಡದ ಕರ್ತವ್ಯವಾಗಿದೆ.
ತಂಡದಲ್ಲಿ ಆಯಾ ವೃತ್ತ ಮತ್ತು ಠಾಣೆಗಳ ವ್ಯಾಪ್ತಿಯ ವೃತ್ತ ನಿರೀಕ್ಷಕರು, ನಿರೀಕ್ಷಕರು, ಸಹಾಯಕ ಪೊಲೀಸ್ ನಿರೀಕ್ಷಕರು, ಹೆಡ್‌ಕಾನ್ಸ್ ಟೇಬಲ್ ಮತ್ತು ಕಾನ್ಸ್‌ಟೇಬಲ್‌ಗಳು ಇರಲಿದ್ದು, ಉಪ ವಿಭಾಗದ ಉಪಾಧೀಕ್ಷಕರುಗಳು ರೌಡಿ ನಿಗ್ರಹ ದಳದ ಕಾರ್ಯಚರಣೆಯ ಕಾರ್ಯ ಕ್ಷಮತೆಯನ್ನು ಪರಿಶೀಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.