ಚಾಮರಾಜನಗರ ತಾಲೂಕಿನ ಚಂದಕವಾಡಿಯಿಂದ ದಡದಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣವಾಗದೇ ಸಂಚಾರಕ್ಕೆ ತೊಂದರೆ ಉಂಟಾಗಿರುವುದು.
- ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾಣದ ರಸ್ತೆಗಳು
- ಮಂದಗತಿ ಕಾಮಗಾರಿಗಳಿಂದಲೂ ತೊಂದರೆ
- ಬೈಕ್ ಅಪಘಾತಗಳು ಹೆಚ್ಚಳ
ಚಾಮರಾಜನಗರ: ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿತ್ಯವೂ ಸಮಸ್ಯೆ ಅನುಭವಿಸುತ್ತಿದ್ದಾರೆ.
ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯ ಪಟ್ಟಣದ ಪ್ರದೇಶದಲ್ಲೇ ಹಲವಾರು ರಸ್ತೆಗಳು ಅಭಿವೃದ್ಧಿ ಕಾಣದೆ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಕಾಮಗಾರಿ ಪ್ರಾರಂಭವಾಗಿದ್ದು, ಎಷ್ಟೋ ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ವಾಹನ ಸವಾರರು ಹಾಗೂ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಕೆಲವು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಧೂಳುಮಯ ರಸ್ತೆಗಳಿಂದ ಜನರು ಹೈರಾಣಾಗುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹೆಚ್ಚಿನ ರಸ್ತೆಗಳು ಇಂದಿಗೂ ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಕೆಲವು ಕಡೆಗಳಲ್ಲಿ ತೀರಾ ಹದಗೆಟ್ಟಿರುವ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತಲೇ ಇದೆ. ಕೆಲವು ರಸ್ತೆಗಳು ಇಂದಿಗೂ ಸಾವಿನ ರಹದಾರಿಗಳಾಗಿ ಮಾರ್ಪಟ್ಟಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಗಳ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
*ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ
ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮಧುವನಹಳ್ಳಿಯಿಂದ ಲೊಕ್ಕನಹಳ್ಳಿ ರಸ್ತೆಯು ಕಳೆದ ಮೂರು ವರ್ಷದಿಂದ ತುಂಬಾ ಹದಗೆಟ್ಟಿದೆ. ಇದರಿಂದ ಮಳೆಗಾಲದ ವೇಳೆ ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ. ಅದರಲ್ಲೂ ದೊಡ್ಡಮಾಲಾಮರ, ಕಂಡಯ್ಯನಪಾಳ್ಯ ಬಳಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ನೀರು ನಿಲ್ಲುವಂತಾಗಿದೆ. ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು.
ಜಗದೀಶ್, ಲೊಕ್ಕನಹಳ್ಳಿ, ಹನೂರು
*ಮಂದಗತಿಯಲ್ಲಿ ಸಾಗುತ್ತಿದೆ ಕಾಮಗಾರಿ
ರಾಮಾಪುರದಿಂದ ನಾಲ್‌ರೋಡ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಿ ಸುಮಾರು ಒಂದು ವರ್ಷವೇ ಕಳೆಯುತ್ತಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಪರಿಣಾಮವಾಗಿ ರಸ್ತೆಯಲ್ಲಿ ವಿಪರೀತ ಧೂಳಿನಿಂದ ಜನರು ಹೈರಾಣರಾಗಿದ್ದಾರೆ. ಬೈಕ್ ಸವಾರರು ಸಂಚರಿಸಲು ಸಮಸ್ಯೆಯಾಗಿದೆ. ಆದ್ದರಿಂದ ಜವಬ್ದಾರಿ ಹೊತ್ತವರು ಕಾಮಗಾರಿಯನ್ನು ಪೂರ್ಣಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
ಶಾಂತಿ, ಅಧ್ಯಕ್ಷೆ, ರೈತ ಸಂಘ, ಗ್ರಾಮ ಘಟಕ, ಪಾಲಿಮೇಡು, ಹನೂರು
*ಅಭಿವೃದ್ಧಿಯಾಗಿ 20ವರ್ಷ ಕಳೆದಿದೆ
ಮುಡಿಗುಂಡ ಮಾರ್ಗವಾಗಿ ಶಿವಕಹಳ್ಳಿ, ಎ.ದೇವರಹಳ್ಳಿ, ಅಲ್ಕೆರೆ ಅಗ್ರಹಾರ, ಮಲಾರಪಾಳ್ಯ, ಗೌಡಹಳ್ಳಿ, ವಡ್ಡಗೆರೆ ಗ್ರಾಮದ ಮೂಲಕ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಭಿವೃದ್ಧಿಯಾಗಿ 20 ವರ್ಷ ಕಳೆದಿದೆ. ಈ ರಸ್ತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು ಇನ್ನೂ ಗಮಹರಿಸದೇ ಇರುವುದು ದೊಡ್ಡ ಸಮಸ್ಯೆಯಾಗಿದೆ. ಈ ಮಾರ್ಗದ ಮೂಲಕ ಬಿಆರ್‌ಟಿಗೆ ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಸೇರಿದಂತೆ ಈ ಭಾಗದ ಜನರು ಸಂಚಾರಿಸುತ್ತಾರೆ. ಆದರೆ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಎಂ.ರಾಜೇಶ್ವರಿ, ಗೌಡಹಳ್ಳಿ ನಿವಾಸಿ, ಯಳಂದೂರು
ತಾಲೂಕಿನ ಕುಮಾರನಪುರ ಗ್ರಾಮದಿಂದ ಗುಂಬಳ್ಳಿ ಗ್ರಾಮದವರೆಗೆ ಸುಮಾರು 2 ಕೋಟಿ ರೂ, ವೆಚ್ಚದಲ್ಲಿ ಗ್ರಾಮೀಣ ಪಂಚಾಯಿತಿ ರಾಜ್ಯ ಇಲಾಖೆ ವತಿಯಿಂದ ಕೈಗೂಂಡಿರುವ ಡಾಂಬರ್ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರಸ್ತುತ ರಸ್ತೆಗೆ ಕಲ್ಲು, ಮಣ್ಣು ಹಾಕಿ ಸಮತಟ್ಟು ಮಾಡಿ ಹೋಗಿದ್ದು, ಇನ್ನೂ ಡಾಂಬರ್ ಹಾಕದೇ ಹಾಗೇ ಬಿಟ್ಟಿರುವ ಪರಿಣಾಮ ರಸ್ತೆಯಲ್ಲಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಚಂದ್ರಶೇಖರ್, ಮಾಜಿ ಗ್ರಾ.ಪಂ. ಸದಸ್ಯರು, ಕುಮಾರನಪುರ ಗ್ರಾಮದ ನಿವಾಸಿ :
*ಸಾವಿನ ದಾರಿಯಾಗಿ ಮಾರ್ಪಟ್ಟಿದೆ
ಕಳೆದ ಮೂರು ತುಂಗಳ ಹಿಂದೆಯಷ್ಟೇ 1.5 ಕೋಟಿ ರೂ, ವೆಚ್ಚದಲ್ಲಿ ಮುಳ್ಳೂರು ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿದೆ. ಆದರೆ, ಇಲ್ಲಿಯವರೆವಿಗೂ ಹೊಸ ರಸ್ತೆ ಮಾಡಲು ಸಂಬಂಧಪಟ್ಟವರು ಮುಂದಾಗಿಲ್ಲ. ಹೊಸ ಹಂಪಾಪುರ ಸೇತುವೆಯಿಂದ ಮುಳ್ಳೂರು ಕೆರೆ ಏರಿಯ ವರೆವಿಗೆ ಮಾತ್ರ ಸಣ್ಣ ಸಣ್ಣ ಗುಂಡಿ ಮುಚ್ಚಿದ್ದಾರೆ. ಕೆರೆ ಏರಿಯಿಂದ ಮುಳ್ಳೂರು ಗ್ರಾಮದ ವರೆವಿಗೆ ಬೃಹತ್ ಹಳ್ಳಗಳು ಬಿದ್ದಿದ್ದು, ಸಾವಿನ ದಾರಿಯಾಗಿ ಮಾರ್ಪಟ್ಟಿದೆ. ಸಂಬಂಧಪಟ್ಟವರು ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು.
ಸೋಮಣ್ಣ ಉಪ್ಪಾರ್, ಗ್ರಾ.ಪಂ ಮಾಜಿ ಸದಸ್ಯ, ಮುಳ್ಳೂರು, ಕೊಳ್ಳೇಗಾಲ
*ಬೈಕ್ ಅಪಘಾತಗಳು ಹೆಚ್ಚಾಗುತ್ತಿದೆ
ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚಾರ ದುಸ್ಥರವಾಗಿದೆ. ಗೀತಾ ಪ್ರೈಮರಿ ಶಾಲೆ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದು ಸವಾರರು ಸಂಚರಿಸಲು ಸಾಧ್ಯವಾಗುತ್ತಿಲ್ಲ. ದಕ್ಷಿಣ ಬಡಾವಣೆಗೆ ಸಂಪರ್ಕಿಸುವ ಈ ರಸ್ತೆ ಬಹಳ ಕಳಪೆಯಿಂದ ಕೂಡಿದ್ದು, ರಸ್ತೆ ಅಭಿವೃದ್ಧಿ ಅತ್ಯಗತ್ಯವಾಗಿದೆ. ಇತ್ತೀಚೆಗೆ ಬೈಕ್ ಅಪಘಾತಗಳು ಹೆಚ್ಚಾಗುತ್ತಿದೆ. ಎಬಿ ಸರ್ಕಲ್, ಆರ್‌ಎಂಸಿ ರಸ್ತೆಯ ಗುಂಡಿಗಳಿಂದ ಜನರು ಹೈರಣಾಗಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಮೊದಲು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ.
ಎ.ಡಿ.ಶಿವಪ್ರಕಾಶ್, ಅಧ್ಯಕ್ಷ, ದಕ್ಷಿಣ ಬಡಾವಣೆ ನಿವಾಸಿಗಳ ಸಂಘ, ಕೊಳ್ಳೇಗಾಲ
*ಗ್ರಾಮೀಣ ಅಭಿವೃದ್ಧಿಯೇ ಕುಂಠಿತ
ಜಿಲ್ಲಾ ಕೇಂದ್ರವನ್ನು ಒಳಗೊಂಡಂತೆ ಗ್ರಾಮೀಣ ಭಾಗದ ರಸ್ತೆಗಳು ಇಂದಿಗೂ ಅಭಿವೃದ್ಧಿಯಾಗಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಎಂಬುದು ಕೇವಲ ಬಾಯಿಮಾತಾಗಿ ಉಳಿದಿದೆ. ಸಾಕಷ್ಟು ರಸ್ತೆಗಳಲ್ಲಿ ಮೆಟ್ಲಿಂಗ್ ಮಾಡಿರುವುದಕ್ಕೆ ಡಾಂಬರು ಹಾಕದೇ ಹಾಗೇ ಬಿಟ್ಟಿದ್ದಾರೆ. ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಕಡಿತವಾಗಿರುವುದು ರಸ್ತೆಗಳ ಅಭಿವೃದ್ಧ ತೊಡಕಾಗಿದೆ. ಜಿಲ್ಲೆಯ ಚುಕ್ಕಾಣಿ ಹಿಡಿಯುವ ಜನಪ್ರತಿನಿಧಿಗಳು ಇಲ್ಲಿನ ನಾಡಿಮಿಡಿತ ಬಲ್ಲವರಾಗದೆ ಇದ್ದರೇ ಇದೇ ಪರಿಸ್ಥಿತಿ ಮುಂದುವರಿಯುತ್ತದೆ.
ಅರುಣ್‌ಕುಮಾರ್, ವಕೀಲ, ಚಾಮರಾಜನಗರ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಪಟ್ಟಿಮಾಡಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡುತ್ತೇನೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತು ಇಂಜಿಯರ್‌ಗಳ ಸಭೆ ಕರೆದು ಚರ್ಚಿಸಲಾಗುವುದು. ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸುವಂತೆ ಸೂಚನೆ ನೀಡುತ್ತೇನೆ.
ಶ್ರೀರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ