ಗುಂಡ್ಲುಪೇಟೆಯಲ್ಲಿ ಸಾಮೂಹಿಕ ನಾಯಕತ್ವ ರೈತರ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.
- ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ತಡೆ
ಗುಂಡ್ಲುಪೇಟೆ: ಟಿಪ್ಪರ್ ಡಿಕ್ಕಿಯಾಗಿ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.
ಟಿಪ್ಪರ್ ಹಾವಳಿ ನಿಯಂತ್ರಣವನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಏಳು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರ್ಯಕರ್ತರು ಮಂಗಳವಾರವೂ ಟಿಪ್ಪರ್ ಡಿಕ್ಕಿಯಾಗಿ ಮೂವರು ಮೃತಪಟ್ಟ ವಿಷಯ ತಿಳಿದು ರಸ್ತೆಗಿಳಿದರು. ಸಾರಿಗೆ ಬಸ್ ನಿಲ್ದಾಣದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದರು.
ಯಮರೂಪಿಯಾದ ಟಿಪ್ಪರ್‌ಗಳು ತಾಲೂಕಿನಲ್ಲಿ ಸಂಚರಿಸುವುದನ್ನು ತಡೆಯುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದೇವೆ. ನೆಪಕ್ಕೆ ಎಂಬಂತೆ ಸಮಯ ನಿಗದಿ ಮಾಡಲಾಗಿದ್ದು, ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದ ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಮೂರು ಸಾವು ಸಂಭವಿಸಿದ್ದು, ಮಗು ಗಾಯಗೊಂಡಿದೆ. ನಮ್ಮ ಬೇಡಿಕೆಯಲ್ಲಿ ಮೊದಲ ಆದ್ಯತೆಯನ್ನು ಟಿಪ್ಪರ್ ಹಾವಳಿ ನಿಯಂತ್ರಣಕ್ಕೆ ಕೊಡಿ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ನಂತರ ತಾಲೂಕು ಕಚೇರಿ ಮುಂದೆ ಸಮಾವೇಶಗೊಂಡರು. ಏ.21 ರಂದು ಸಿಎಂ ಬರುವ ದಿನದಂದು ಪ್ರತಿಭಟನೆ ತೀವ್ರಗೊಳಿಸುವ ತೀರ್ಮಾನ ಪ್ರಕಟಿಸಿದರು. ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.