ಗುಂಡ್ಲುಪೇಟೆ ತಾಲೂಕಿನ ದೇಪಾಪುರ ಗ್ರಾಮದಲ್ಲಿ ಅಪರಾಧತಡೆ ಮಾಸಾಚರಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಸಬ್‌ಇನ್ಸ್‌ಪೆಕ್ಟರ್ ಮಹೇಶ್ ಮಾತನಾಡಿದರು.
ಗುಂಡ್ಲುಪೇಟೆ : ವಾಹನ ಚಾಲನೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಕಡ್ದಾಯವಾಗಿ ಪಾಲಿಸಬೇಕು ಎಂದು ತೆರಕಣಾಂಬಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್ ಹೇಳಿದರು.
ತಾಲೂಕಿನ ದೇಪಾಪುರ ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆಲ್ಮೆಟ್ ಧರಿಸಿದವರು ಅಪಘಾತಕ್ಕೊಳಗಾದರೂ ಮರಣಹೊಂದುವ ಸಾಧ್ಯತೆ ತುಂಬಾ ಕಡಿಮೆಯಾಗಿರುತ್ತದೆ. ಆದರೆ ಹೆಚ್ಚಿನ ಬೈಕ್ ಸವಾರರು ಮೃತರಾಗುವುದು ಹೆಲ್ಮೆಟ್ ಇಲ್ಲದ ಕಾರಣದಿಂದ. ಹಾಗಾಗಿ ಅಮೂಲ್ಯ ಜೀವ ರಕ್ಷಣೆಗೆ ನಿಯಮ ಪಾಲನೆ ಕಡ್ಡಾಯವಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರುಗಳಲ್ಲಿ ಪ್ರಯಾಣಿಸುವವರು ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಸೀಟ್ ಬೆಲ್ಟ್ ಅಳವಡಿಸಿಕೊಂಡರೆ ಮಾತ್ರ ತುರ್ತು ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆಯುತ್ತದೆ. ಪ್ರಯಾಣಿಕರ ಜೀವ ಉಳಿಯುತ್ತದೆ. ಈ ಬಗ್ಗೆ ಎಚ್ಚರ ಅಗತ್ಯ ಎಂದರು.
ಜೀವನೋಪಾಯಕ್ಕೆ ಒಂದೆಡೆಯಿಂದ ಮತ್ತೊಂದೆಡೆಗೆ ಕೂಲಿಗಾಗಿ ಬರುವ ಕಾರ್ಮಿಕರು ಕೆಲಸದ ಸಂದರ್ಭ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತಾಗಬೇಕು. ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ಸುರಕ್ಷಿತ ಸ್ಥಳದಲ್ಲಿ ಅಥವಾ ಬ್ಯಾಂಕ್ ಲಾಕರ್‌ಗಳಲ್ಲಿ ಇಡಬೇಕು. ಮನೆ ಬೀಗ ಹಾಕಿ ಪರ ಊರಿಗೆ ತೆರಳುವ ಸಂದರ್ಭ ಠಾಣೆಗೆ ಮಾಹಿತಿ ನೀಡಬೇಕು ಎಂದರು. ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.