ಲೊಕ್ಕನಹಳ್ಳಿಯಲ್ಲಿ ಆಯೋಜಿಸಿದ್ದ ಕಂದಾಯ ಅದಾಲತ್ ಹಾಗೂ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣಾ ಕಾರ್ಯಕ್ರಮವನ್ನು ಶಾಸಕ ಎಂ.ಆರ್.ಮಂಜುನಾಥ್ ಉದ್ಘಾಟಿಸಿದರು. ಕೆ.ಎನ್ ಚೈತ್ರಾ, ರವಿ, ಕುಮಾರಸ್ವಾಮಿ, ಮಹದೇವಸ್ವಾಮಿ ಇದ್ದರು.
ಹನೂರು: ಆರ್ಹ ಫಲಾನುಭವಿಗಳು ಕಚೇರಿಗೆ ಅರ್ಜಿಯ ಜತೆಗೆ ಅಗತ್ಯ ದಾಖಲೆಯನ್ನು ಸಲ್ಲಿಸುವುದರ ಮೂಲಕ ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಕಾಲೇಜು ವಿಭಾಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಂದಾಯ ಅದಾಲತ್ ಹಾಗೂ ಇಲಾಖೆಯ ವಿವಿಧ ಯೋಜನೆಯ ದಾಖಲೆಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಹಲವು ಸಮಸ್ಯೆಗಳಿತ್ತು. ಇದರಿಂದ ಜನರು ಕಚೇರಿಗೆ ಅಲೆಯುವಂತಾಗಿತ್ತು. ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಲಾಖೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ್ದು ಪ್ರಗತಿದಾಯಕವಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗುತ್ತಿದೆ ಎಂದರು.
ಲೊಕ್ಕನಹಳ್ಳಿ ನಾಡ ಕಚೇರಿ ಪೈಲೆಟ್ ಯೋಜನೆಗೆ ಒಳಪಟ್ಟಿದ್ದು ಭೂ ಸುರಕ್ಷತಾ ಯೋಜನೆಯಡಿ ದಾಖಲೆಗಳೆಲ್ಲವೂ ಡಿಜಿಟಲೀಕರಣವಾಗಿದೆ. ಕಂದಾಯ ದಾಖಲೆ, ಹಕ್ಕುಪತ್ರ, ಪಹಣಿ, ಪೌತಿಖಾತೆ ದಾಖಲೆಯನ್ನು ಕಚೇರಿಯಲ್ಲೇ ಪಡೆಯಬಹುದು. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ನಿಖರ ದಾಖಲೆಯನ್ನು ಹೊಂದಬೇಕು ಎಂದು ತಿಳಿಸಿದರು.
ಗ್ರಾಮದ ಚಿಕ್ಕಸ್ವಾಮಿ ಅವರು ಮಾತನಾಡಿ, ಹೋಬಳಿ ವ್ಯಾಪ್ತಿಯಲ್ಲಿ ಜಮೀನಿಗೆ ತೆರಳಲು ಬಂಡಿದಾರಿಯ ಸಮಸ್ಯೆಯಿದ್ದು ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಈ ಬಗ್ಗೆ ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿದರು.
ಫಲಾನುಭವಿಗಳಿಗೆ ಆದೇಶ ಪತ್ರ ಹಾಗೂ ಡಿಜಿಟಲ್ ದಾಖಲೆಗಳನ್ನು ವಿತರಿಸಲಾಯಿತು. ತಹಸೀಲ್ದಾರ್ ಕೆ.ಎನ್.ಚೈತ್ರಾ, ಕೊಳ್ಳೇಗಾಲ ಗ್ರೇಡ್ 2 ತಹಸೀಲ್ದಾರ್ ರವಿ, ಭೂ ಮಾಪನ ಇಲಾಖೆಯ ಅಧೀಕ್ಷಕ ಕುಮಾರಸ್ವಾಮಿ, ಆರ್‌ಐ ಮಹದೇವಸ್ವಾಮಿ ಇದ್ದರು.