ಗುಂಡ್ಲುಪೇಟೆಯ ಶ್ವೇತಾದ್ರಿ ಬಡಾವಣೆಯಲ್ಲಿರುವ ಜ್ಞಾನಸೂರ್ಯ ಭವನದಲ್ಲಿ ಆಯೋಜಿಸಿದ್ದ ತಾಯಂದಿರ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು. ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ, ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ, ತಾರಾ, ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ಇತರರಿದ್ದರು. 
ಚಾಮರಾಜನಗರ

ಜನ್ಮದಾತೆಯನ್ನು ಗೌರವದಿಂದ ಕಾಣಿರಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಹೇಳಿಕೆ
  • ತಾಯಂದಿರ ದಿನಾಚರಣೆ
ಗುಂಡ್ಲುಪೇಟೆ: ತಾಯಿ ಮತ್ತು ಜಗತ್ತು ಪರಸ್ಪರ ಪೂರಕವಾಗಿದ್ದು ಯಾರೂ ತಮಗೆ ಜನ್ಮ ನೀಡಿದ ತಾಯಿಗೆ ನೋವುಂಟು ಮಾಡಬಾರದು ಎಂದು ಮಂಡ್ಯದ ಈಶ್ವರೀಯ ವಿಶ್ವವಿದ್ಯಾಲಯಗಳ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾರದಾಜೀ ಅಭಿಪ್ರಾಯಪಟ್ಟರು.
ಪಟ್ಟಣದ ಶ್ವೇತಾದ್ರಿ ಬಡಾವಣೆಯಲ್ಲಿರುವ ಜ್ಞಾನಸೂರ್ಯ ಭವನದಲ್ಲಿ ಆಯೋಜಿಸಿದ್ದ ತಾಯಂದಿರ ದಿನಾಚರಣೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕೃತಿ ಮಾತೃಪ್ರಧಾನವಾಗಿದ್ದು ಒಂದೇ ಮಾತರಂ ಗಾಯನ ಸಹ ಮಾತೆಯರಿಗೆ ಗೌರವ ಸಲ್ಲಿಸಲು ರಚಿಸಲಾಗಿದೆ. ಪ್ರತಿಯೊಬ್ಬರ ಜನನಕ್ಕೂ ತಾಯಿಯೇ ಕಾರಣೀಭೂತರಾಗಿದ್ದು ಪ್ರತಿಯೊಬ್ಬರೂ ಆಕೆಯ ತ್ಯಾಗವನ್ನು ಸದಾಕಾಲ ಸ್ಮರಿಸಬೇಕು ಎಂದು ಹೇಳಿದರು.
ಮನೋಬಲ ತರಬೇತುದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ಭಾರತದ ಸನಾತನ ಸಂಸ್ಕೃತಿಯ ಮೂಲ ಬೇರು ಮಾತೆಯಾಗಿದ್ದಾರೆ. ಮಾತೆಯರು ಏನು ಬೇಕಾದರೂ ಮಾಡಲು ಸಾಧ್ಯವಿದೆ. ಆದರೆ ಇಂದು ರಸ್ತೆಗಳು, ಮನೆಗಳು ಹಾಗೂ ಕಾಂಪೌಂಡ್‌ಗಳು ದೊಡ್ಡದಾಗುತ್ತಿವೆ. ಮನಸ್ಸುಗಳು ಮಾತ್ರ ಸಂಕುಚಿತವಾಗುತ್ತಿವೆ. ಮಾತೆಯರು ಅಧ್ಯಾತ್ಮಿಕವಾಗಿ ಸಶಕ್ತಿಕರಣಗೊಳ್ಳದಿರುವುದರಿಂದ ಮನೆಯಲ್ಲಿ ತಂದೆತಾಯಿ ಕಂಡರೆ ಮಕ್ಕಳಿಗೆ, ಮಕ್ಕಳನ್ನು ಕಂಡರೆ ತಂದೆ ತಾಯಿಗಳಿಗೆ ಆಗುತ್ತಿಲ್ಲ. ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತಾಂಡವಾಡುತ್ತಿವೆ ಎಂದು ಬೇಸರಿಸಿದರು.
ಪತ್ರಕರ್ತೆ ತಾರಾ ಮಾತನಾಡಿದರು. ಬಿ.ಕೆ. ಆರಾಧ್ಯ ಸ್ವಾಗತಿಸಿದರು. ರಾಜಯೋಗಿನಿ ಬ್ರಹ್ಮಾಕುಮಾರಿ ವೀಣಾಜೀ ವಂದಿಸಿದರು. ಕಾರ್ಯಕ್ರಮದಲ್ಲಿ ಹೊಳೆನರಸೀಪುರದ ಸರೋಜಾಜೀ, ಶಾಂಭವೀಜೀ, ವಿಜಿಯಾಜೀ, ಗೌರಿ, ಗಿರಿಜಾ, ರೇಖಾ, ಭಾಗ್ಯಾ ಹಾಜರಿದ್ದರು.