ಅಜ್ಜೀಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಮಾಜಿ ಶಾಸಕ ಆರ್.ನರೇಂದ್ರ ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿದರು. ನಾಗರಾಜು, ಶ್ರೀನಿವಾಸ್, ಶಾಕೀರ್‌ಪಾಷ, ಮಹದೇವ ಇತರರಿದ್ದರು.
- ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ನರೇಂದ್ರ ಸಲಹೆ
ಹನೂರು: ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ಸಾಲವನ್ನು ಮರುಪಾವತಿಸುವುದರ ಮೂಲಕ ಇನ್ನು ಹೆಚ್ಚಿನ ಸಾಲವನ್ನು ಪಡೆಯುವಂತಾಗಬೇಕು ಎಂದು ಮಾಜಿ ಶಾಸಕ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ನರೇಂದ್ರ ತಿಳಿಸಿದರು.
ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಅಜ್ಜೀಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.
ರೈತರು ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಜಿಲ್ಲೆಯ ರೈತರಿಗೆ ಸಾಲ ನೀಡಲು ಹೆಚ್ಚು ಒತ್ತು ನೀಡಲಾಗಿದೆ. ಈ ದೆಸೆಯಲ್ಲಿ ಅಜ್ಜೀಪುರ ಪಿಎಸಿಸಿ ಸಂಘದ 63 ನೂತನ ಸದಸ್ಯರಿಗೆ 73.83 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಬೇಕು. ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾತಿಸಿ ಹೆಚ್ಚಿನ ಸೌಕರ್ಯ ಪಡೆಯಬೇಕು. ಸಂಘದ ಆಡಳಿತ ಮಂಡಳಿ ನಿಸ್ವಾರ್ಥದಿಂದ ಕಾರ್ಯನಿರ್ವಹಿಸುವುದರ ಮೂಲಕ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ದೊರಕಿಸಿ ಕೊಡಬೇಕು. ಜತೆಗೆ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಸಂಘದಿಂದ ದೊರಕುವ ಸೌಕರ್ಯದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಹೆಚ್ಚಿನ ರೈತರು ಸಂಘದಲ್ಲಿ ಸದಸ್ಯತ್ವ ಪಡೆಯುವಂತಾಗಬೇಕು. ಈ ಬಗ್ಗೆ ಆಡಳಿತ ಮಂಡಳಿ ಅಗತ್ಯ ಕ್ರಮವಹಿಸಬೇಕು. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ಸಾಲವನ್ನು ಕೊಡಿಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಶಾಕೀರ್ ಪಾಷ, ನಿರ್ದೇಶಕರಾದ ಮಹದೇವ, ಲೋಕೇಶ್, ಚಜ್ಜೇಗೌಡ, ಸಿಇಒ ರಾಜೇಶ್ವರಿ, ಮೇಲ್ವಿಚಾರಕ ರಮೇಶ್ ಇತರರಿದ್ದರು.