ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಪಿ.ಮರಿಸ್ವಾಮಿ, ಮಹಮದ್ ಅಸ್ಗರ್ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಟಿ.ಜವರೇಗೌಡ, ರಾಜು, ಸಿ.ಪಿ.ನವೀನ್ ಇತರರಿದ್ದರು.
- ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಅಭಿಪ್ರಾಯ
- ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮ
ಚಾಮರಾಜನಗರ: ಶ್ರೀಜಗದ್ಗುರು ರೇಣುಕಾಚಾರ್ಯರು ಇಷ್ಟಲಿಂಗ ಪೂಜೆ ಮೂಲಕ ಭಗವಂತನನ್ನು ವೈಯಕ್ತಿಕ ಅನುಭವದ ಮೇಲೆ ಅರಿತುಕೊಳ್ಳಬೇಕೆಂಬ ತತ್ವವನ್ನು ಪ್ರಚಾರ ಮಾಡಿದರು ಎಂದು ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿ, ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಮೇಲು ಕೀಳು ಎಂಬುದು ಇಲ್ಲ. ಎಲ್ಲರೂ ಸಮಾನರೆಂದು ಸಾರಿದರು. ಸಮಾಜದ ಸಮಾನತೆ, ಧಾರ್ಮಿಕ ಸಾಮರಸ್ಯಕ್ಕೆ ರೇಣುಕಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನಾ) ಮಾತನಾಡಿ, ರೇಣುಕಾಚಾರ್ಯರ ತತ್ವ, ಸಿದ್ಧಾಂತಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ. ಅವರ ಆದರ್ಶ, ಮಾರ್ಗದರ್ಶನ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, ರೇಣುಕಾಚಾರ್ಯರು ಅದ್ವೈತ ತತ್ವವನ್ನು ಪ್ರತಿಪಾದಿಸಿ ಎಲ್ಲ ಜೀವಿಗಳಲ್ಲೂ ಶಿವನ ಅಂಶವಿದೆ ಎಂದರು. ಇಷ್ಟಲಿಂಗವನ್ನು ಧರಿಸುವ ಮೂಲಕ ನಿತ್ಯ ಶಿವನೊಂದಿಗೆ ಸಂಬಂಧವನ್ನು ಕಾಪಾಡಬೇಕೆಂಬ ತತ್ವವನ್ನು ಅವರು ಬೋಧಿಸಿದರು ಎಂದು ತಿಳಿಸಿದರು.
ದಾರ್ಶನಿಕರ, ಮಹಾಪುರುಷರ ಜಯಂತಿಗಳನ್ನು ಆಚರಿಸುವ ಉದ್ದೇಶ ಅವರ ಆದರ್ಶಗಳಿಂದ ಜಗತ್ತು ಬೆಳಕಾಗಲಿ ಎಂಬುದೇ ಆಗಿದೆ. ಇವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸರ್ವರ ಶ್ರೇಯಸ್ಸು ಬಯಸಬೇಕು ಎಂಬುದು ಮುಖ್ಯ ಅಶಯವಾಗಿದೆ ಎಂದು ಹೇಳಿದರು.
ಇದೇ ವೇಳೆ ರೇಣುಕಾಚಾರ್ಯರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ನಮಿಸಿದರು. ಪಾರ್ವತಿ ಮಹಿಳಾ ಸಮಾಜದ ಆಶಾ ರಮೇಶ ಹಾಗೂ ತಂಡದವರು ಭಕ್ತಿ ಗೀತೆ ಗಾಯನ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಪೂರ್ವ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಿ.ಪಿ.ನವೀನ್, ಸಮುದಾಯದ ಮುಖಂಡ ಮಲ್ಲಿಕಾರ್ಜುನ್, ಎಚ್.ಬಿ.ವಿಶ್ವಕುಮಾರ್, ಮಹದೇವಸ್ವಾಮಿ, ಮಂಜುನಾಥ್ ಇತರರಿದ್ದರು.