ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಶಿವಲಿಂಗೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಇಮ್ಮಡಿ ಉದ್ದಾನ ಸ್ವಾಮೀಜಿ, ಸಿದ್ದಮಲ್ಲಪ್ಪ ಸ್ವಾಮೀಜಿ, ಇಮ್ಮಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜಡೇಸ್ವಾಮೀಜಿ, ಗೋಪಾಲಪುರ ಸ್ವಾಮೀಜಿ ಇತರರು ಇದ್ದರು.
ಗುಂಡ್ಲುಪೇಟೆ: ಪ್ರತಿಯೊಬ್ಬ ವ್ಯಕ್ತಿಯ ನಂಬಿಕೆ ಹಾಗೂ ಆಚರಣೆಗಳು ಬೇರೆಯಾಗಿದ್ದರೂ ಧಾರ್ಮಿಕ ಕಾರ್ಯಗಳು ಎಲ್ಲರನ್ನೂ ಒಂದುಗೂಡಿಸುತ್ತವೆ ಎಂದು ಪಡುಗೂರು ಶಿವಲಿಂಗೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಹೊಂಗಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಗ್ರಾಮ ದೇವತೆ ಮಾರಮ್ಮನ ದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಅಂಕ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಸ್ಥರು ಒಗ್ಗೂಡಿದ ಪರಿಣಾಮ ಕೇವಲ 9 ತಿಂಗಳ ಅವಧಿಯಲ್ಲಿ ತಮ್ಮಲ್ಲೇ 50 ಲಕ್ಷ ರೂ. ಹಣ ಹೊಂದಿಸಿಕೊಂಡು ಮಾರಮ್ಮನ ದೇವಾಲಯ ನಿರ್ಮಿಸಿರುವುದು ಧಾರ್ಮಿಕ ನಂಬಿಕೆಗಿರುವ ಶಕ್ತಿಯಾಗಿದೆ. ಗ್ರಾಮಕ್ಕೆ ದುರಾಚಾರಗಳು ಬಾರದಂತೆ ನೋಡಿಕೊಳ್ಳುವುದು ದೇವರ ಶಕ್ತಿ. ಅದೇ ರೀತಿ ತನ್ನನ್ನು ತಾನು ಅರಿಯುವುದರಲ್ಲಿ ದೇವರನ್ನು ಕಾಣು ಎಂದು ಹೇಳಲಾಗುತ್ತದೆ. ಯುವಕರ ಶ್ರಮ, ಕಾಳಜಿ, ಶಿಸ್ತು ಮೆಚ್ಚುವಂತದ್ದು, ಭವಿಷ್ಯದಲ್ಲೂ ಶುದ್ಧ ಮನಸ್ಸಿನಿಂದ ಇದೇ ರೀತಿ ಗ್ರಾಮಸ್ಥರು ಮುಂದುವರಿಯಲಿ ಎಂದು ಹಾರೈಸಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಹೊಂಗಹಳ್ಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ಕೆ ಜನಸಾಗರವೇ ಹರಿದು ಬಂದಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ದೊಡ್ಡ ಪ್ರಮಾಣದ ಧಾರ್ಮಿಕ ಕಾರ್ಯ ನಡೆಸಿರುವುದು ಉತ್ತಮ ವಿಚಾರ. ಗ್ರಾಮದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ. ರೈತರ ಆದಾಯ ಹೆಚ್ಚಾಗಿ, ಎಲ್ಲರೂ ಸುಖ, ಸಮೃದ್ಧಿಯಿಂದ ಇರಲಿ ಎಂದು ಹಾರೈಸಿದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿದರು. ಸಾಹಿತಿ ಕೊಡಗಾಪುರ ಗುರುಪ್ರಸಾದ್ ಮುಖ್ಯಭಾಷಣ ಮಾಡಿದರು. ಕಸಾಪ ಮಾಜಿ ಅಧ್ಯಕ್ಷ ಪಿ.ಸಿ.ರಾಜಶೇಖರ ಗ್ರಾಮದ ಇತಿಹಾಸದ ಬಗ್ಗೆ ತಿಳಿಸಿದರು.
ಮೂಡುಗೂರು ಮಠದ ಇಮ್ಮಡಿ ಉದ್ದಾನ ಸ್ವಾಮೀಜಿ, ಸೋಮಹಳ್ಳಿ ಮಠದ ಸಿದ್ದಮಲ್ಲಪ್ಪ ಸ್ವಾಮೀಜಿ, ಬೊಮ್ಮನಹಳ್ಳಿ ಮಠದ ಇಮ್ಮಡಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹಂಗಳ ಹಳ್ಳದ ಮಠಾಧ್ಯಕ್ಷ ಜಡೇಸ್ವಾಮೀಜಿ, ಗೋಪಾಲಪುರ ಗಂಗಾಧರೇಶ್ವರ ಮಠದ ಸ್ವಾಮೀಜಿ, ಹರವೆ ಸರ್ಪಭೂಷಣ ಸ್ವಾಮೀಜಿ, ಚಿಕ್ಕತುಪ್ಪೂರು ಚನ್ನವೀರ ಸ್ವಾಮೀಜಿ, ಹಂಗಳ ಪಟ್ಟದ ಮಠಾಧ್ಯಕ್ಷ ಷಡಕ್ಷರಿ ಸ್ವಾಮೀಜಿ, ಕಬ್ಬಹಳ್ಳಿ ಗುರುಸಿದ್ದ ಸ್ವಾಮೀಜಿ, ಕಾಶೀಆರಾಧ್ಯ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿ.ಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್ ಸೇರಿದಂತೆ ಹಲವರು ಇದ್ದರು.