pradhan Manthri Kissan Samman Yojana
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಶಶಿಧರ್ ಮನವಿ
ಗುಂಡ್ಲುಪೇಟೆ: ರೈತರು ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಸದಲ್ಲಿ ನೋಂದಾಯಿಸಿಕೊಳ್ಳಿ ಕೃಷಿ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಶಶಿಧರ್ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 6000 ರೂ. ಸೌಲಭ್ಯ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ರಾಜ್ಯ ನೇರ ನಗದು ವರ್ಗಾವಣೆ ಯೋಜನೆ, ಬೆಳೆ ಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆ, ಬ್ಯಾಂಕ್ ಸಾಲ ಪಡೆಯಲು ಕೃಷಿ ಮತ್ತು ಇತರ ಇಲಾಖೆಗಳ ವಿವಿಧ ಯೋಜನೆಗಳಲ್ಲಿ ಹಾಲಿ ಒದಗಿಸುತ್ತಿರುವ ಮತ್ತು ಭವಿಷ್ಯದಲ್ಲಿ ಒದಗಿಸಲಾಗುವ ಯೋಜನೆಗಳ ಸೌಲಭ್ಯ ಪಡೆಯಲು ಈಗಾಗಲೇ ಲಭ್ಯವಿರುವ ಹಾಗೂ ಕಂದಾಯ ಇಲಾಖೆಯ ಪಹಣಿಗಳಲ್ಲಿ ರೈತರ ಭೂ ಹಿಡುವಳಿ ವಿವರಗಳನ್ನು ಕಡ್ಡಾಯವಾಗಿ ರಾಜ್ಯಮಟ್ಟದಲ್ಲಿ ಫ್ರೂಟ್ಸ್ ಮತ್ತು ರಾಷ್ಟ್ರ ಮಟ್ಟದಲ್ಲಿ ಅಗ್ರಿಸ್ಪಾಕ್ ರೂಪದಲ್ಲಿ ರಚಿಸಲಾಗುತ್ತಿರುವ ಒಂದು ಕೇಂದ್ರ ನೋಂದಾಯಿತ ರೈತರ ಸಂಖ್ಯೆಯನ್ನು ಸೃಜಿಸಿಕೊಂಡು ನವೀಕರಿಸಲು ಅತ್ಯವಶ್ಯಕವಾಗಿರುತ್ತದೆ.
ಪ್ರಸ್ತುತ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು ಮುಂದುವರಿಸಿಕೊಳ್ಳಲು ಗುಂಡ್ಲುಪೇಟೆ ತಾಲೂಕಿನಲ್ಲಿ 8,142 ರೈತರ ಮಾಹಿತಿ ನೋಂದಣಿ ಮಾಡಿಸಿ ನವೀಕರಿಸಿಕೊಳ್ಳಲು ಬಾಕಿ ಇರುತ್ತದೆ.
ಆದ ಕಾರಣ ಫೆ.26 ರೊಳಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶುಸಂಗೋಪನೆ ಇಲಾಖೆ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ತಮ್ಮ ಆಧಾರ್ ಕಾರ್ಡ್, ಅದರೊಂದಿಗೆ ಜೋಡಣೆಯಾಗಿರುವ ಮೊಬೈಲ್, ಬ್ಯಾಂಕ್ ಪಾಸ್ ಪುಸ್ತಕ, ಜಾತಿ ಪ್ರಮಾಣ ಪತ್ರ ಹಾಗೂ ಹೊಂದಿರುವ ಎಲ್ಲ ಪಹಣಿಗಳ ಜೋಡಣೆಯನ್ನು ಮಾಡಿಸಿ ರೈತರು ವಿದ್ಯುನ್ಮಾನ ಮೂಲಕ ಕಡ್ಡಾಯವಾಗಿ ಸಹಮತಿ ನೀಡಿ ಇ-ಕೆವೈಸಿ ಮಾಡಿಸಿಕೊಂಡು ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.