ಕೊಳ್ಳೇಗಾಲದ ಶ್ರೀಮಹದೇಶ್ವರ ಕ್ರೀಡಾಂಗಣ ಮಳೆ ನೀರಿನಿಂದ ಕೆರೆಯಂತೆ ಮಾರ್ಪಟ್ಟಿದ್ದರಿಂದ ಗುರುವಾರ ಆಯೋಜಿಸಿದ್ದ ಪ್ರೌಢಶಾಲೆಗಳ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ತೊಂದರೆಯಾಯಿತು.
- ತಡವಾಗಿ ಆರಂಭವಾದ ಕ್ರೀಡಾಸ್ಪರ್ಧೆಗಳು
- ತೇವಾಂಶ ಕಡಿಮೆಯಾಗುವ ತನಕ ಕಾದ ಆಯೋಜಕರು, ಕ್ರೀಡಾಪಟುಗಳು
ಕೊಳ್ಳೇಗಾಲ: ಮಳೆಯಿಂದ ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣ ಕೆರೆಯಂತೆ ಮಾರ್ಪಟಿದ್ದು ಗುರುವಾರ ಆಯೋಜಿಸಿದ್ದ ಪ್ರೌಢಶಾಲೆಗಳ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ತೊಂದರೆಯಾಯಿತು.
ಮೂರು ದಿನಗಳಿಂದ ರಾತ್ರಿ ಸುರಿದ ಮಳೆಯಿಂದ ಮೈದಾನದ ಭಾಗಶಃ ಪ್ರದೇಶದಲ್ಲಿ ನೀರು ನಿಂತು ಸಮಸ್ಯೆಯಾಯಿತು. ಮೈದಾನದಲ್ಲಿ ಮಳೆಯಿಂದ ಶೇಖರಣೆಗೊಂಡ ನೀರು ಸರಾಗವಾಗಿ ಮೈದಾನದಿಂದ ಹೊರಗೆ ಹೋಗುವ ವ್ಯವಸ್ಥೆ ಇಲ್ಲದ ಕಾರಣ ತೊಂದರೆಯಾಗುತ್ತದೆ ಎಂಬ ಅರಿವಿದ್ದರೂ ಸಂಬಂಧಪಟ್ಟ ಕ್ರೀಡಾ ಇಲಾಖೆ ಅಧಿಕಾರಿಗಳು ಮಳೆ ನೀರು ಮೈದಾನದಿಂದ ಹೊರ ಹೋಗಲು ಹಾಗೂ ಕ್ರೀಡಾಂಗಣ ಸುಧಾರಣೆಗೆ ಕ್ರಮವಹಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವ್ಯವಸ್ಥೆಗೆ ಕ್ರೀಡಾ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮೈದಾನದಲ್ಲಿ ನಿಂತಿದ್ದ ನೀರನ್ನು ಹೊರಗೆ ತೆಗೆಯಲು ನಗರಸಭೆ ಯುಜಿಡಿ ಸ್ವಚ್ಛ ಮಾಡುವ ವಾಹನವನ್ನು ತರಿಸಿ ನೀರನ್ನು ಹೊರ ಹಾಕಿಸಲಾಯಿತು. ಬಿಸಿಲಿನ ವಾತಾವರಣದಿಂದ ಮೈದಾನದ ತೇವಾಂಶ ಕಡಿಮೆಯಾಗಲಿದೆ ಎಂದು ಆಟಗಾರರು ಹಾಗೂ ಆಯೋಜಕರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಪಾಳ್ಯದ ಗ್ರಾಮಾಂತರ ಪ್ರೌಢಶಾಲೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟ 10 ಗಂಟೆಗೆ ಪ್ರಾರಂಭಿಸಬೇಕಾಗಿತ್ತು. ಆದರೆ. ಮಳೆ ನೀರಿನ ಸಮಸ್ಯೆಯಿಂದ ವೇದಿಕೆ ಕಾರ್ಯಕ್ರಮ 10.35 ಕ್ಕೆ ಆರಂಭಗೊಂಡಿತು. ಭಾಷಣ ಕಾರ್ಯಕ್ರಮ ಮುಗಿದ ಬಳಿಕ ಕ್ರೀಡೆಗಳು 11.30ಕ್ಕೆ ಆರಂಭವಾಯಿತು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಒತ್ತು ನೀಡಬೇಕು. ಕ್ರೀಡೆಯಿಂದ ಮನಸನ್ನು ಹತೋಟಿಗೆ ತರಲು ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಪ್ರತಿಭೆ ತೋರಲು ಒಂದು ಉತ್ತಮ ವೇದಿಕೆಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಬಿಆರ್‌ಸಿ ಮಹದೇವ ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್, ಪಾಳ್ಯ ಗ್ರಾಮಾಂತರ ಪ್ರೌಢಶಾಲೆ ಕಾರ್ಯದರ್ಶಿ ಪ್ರವೀಣ್ ಕುಮಾರ್, ಶಿಕ್ಷಕ ಉಮಾಶಂಕರ್ ಇತರರು ಇದ್ದರು.
ಮಳೆ ನೀರು ಮೈದಾನದ ಅರ್ಧದಷ್ಟು ಪ್ರದೇಶದಲ್ಲಿ ತುಂಬಿತ್ತು. ಹಾಗಾಗಿ ಆಯೋಜಕರು ನೀರಿಲ್ಲದ ಸ್ಥಳದಲ್ಲಿ ಗುಂಡು ಎಸೆತ, ತಟ್ಟೆ ಎಸೆತ, ಬರ್ಜಿ ಎಸೆತ, ಖೋಖೋ, ಕಬಡ್ಡಿ, ಥ್ರೋಬಾಲ್, ವಾಲಿಬಾಲ್ ಇನ್ನಿತರ ಕ್ರೀಡೆಗಳನ್ನು ಆಡಿಸಿದ್ದರು. ಮೈದಾನ ಒದ್ದೆಯಾಗಿದ್ದರಿಂದ ಕೆಲವು ಕ್ರೀಡೆಗಳಲ್ಲಿ ಆಟಗಾರರು ಜಾರಿ ನಿಯಂತ್ರಣ ತಪ್ಪಿ ಪ್ರಸಂಗ ನಡೆಯಿತು. ಕೊನೆಗೆ ಓಟದ ಸ್ಪರ್ಧೆಯನ್ನು 200 ಮೀಟರ್ ಟ್ರ್ಯಾಕ್ ನಿರ್ಮಿಸಿ ನಡೆಸಲಾಯಿತು.