ಮಿಣ್ಯಂ ಸಮೀಪದ ಮಿನ್ನತ್ತುಹಳ್ಳದಲ್ಲಿ ಯಥೇಚ್ಛವಾದ ನೀರು ಹರಿಯಿತು.
ಹನೂರು: ತಾಲೂಕಿನಾದ್ಯಂತ ಸೋಮವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾದ್ದರಿಂದ ಇಳೆ ತಂಪಾಗಿದ್ದು, ರೈತರಲ್ಲಿ ಗೌರಿ, ಗಣೇಶ ಹಬ್ಬದಂದು ಕೊಂಚ ಸಮಾಧಾನ ಮೂಡಿತು.
ಈ ವರ್ಷ ಮುಂಗಾರು ಕೈ ಕೊಟ್ಟ ಪರಿಣಾಮ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಜಾನುವಾರು ಮೇವಿಗಾಗಿ ಪರಿತಪಿಸುತ್ತಿವೆ. ಇಷ್ಟೋತ್ತಿಗಾಗಲೇ ಜಮೀನಿನಲ್ಲಿ ಬಿತ್ತನೆ ಪೂರ್ಣಗೊಳ್ಳಬೇಕಿದ್ದ ಕಾರ್ಯ ಮಳೆಯಿಲ್ಲದ ಪರಿಣಾಮ ರೈತರು ಕೈ ಕಟ್ಟಿ ಕೂರುವಂತಾಗಿದೆ. ವಾರದಿಂದ ಬಿಸಿಲಿನ ತಾಪವೂ ಹೆಚ್ಚಾಗಿತ್ತು.
ಸೋಮವಾರ ಸಂಜೆ 4ರಲ್ಲಿ ಪಟ್ಟಣ ಸೇರಿದಂತೆ ಮಲೆ ಮಹದೇಶ್ವರ ಬೆಟ್ಟ, ಮಿಣ್ಯಂ, ಕೊಪ್ಪ, ಗಾಜನೂರು, ರಾಮಾಪುರ, ಅಜ್ಜೀಪುರ, ಮಂಗಲ, ಕಣ್ಣೂರು, ಗುಂಡಾಪುರ, ಚಿಂಚಳ್ಳಿ ಹಾಗೂ ಈ ಭಾಗದ ಇನ್ನಿತರ ಕಡೆಗಳಲ್ಲಿ ಗುಡುಗು ಸಹಿತ ಸುಮಾರು ಒಂದು ಗಂಟೆ ಕಾಲ ಜೋರು ಮಳೆಯಾಯಿತು. ಮಿಣ್ಯಂ ಭಾಗದ ಮಿನ್ನತ್ತು ಹಳ್ಳದಲ್ಲಿ ಯಥೇಚ್ಛವಾದ ನೀರು ಹರಿದರೆ, ಕೆಲವು ಕೆರೆ ಕಟ್ಟೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹೊಲ, ರಸ್ತೆಗಳಲ್ಲೂ ನೀರು ಹರಿಯಿತು. ಬಿಸಿಲಿನ ತಾಪಕ್ಕೆ ಕಾದಿದ್ದ ಭೂಮಿ ತಂಪು ಅನುಭವವನ್ನು ನೀಡಿತು. ರೈತರು ಹಾಗೂ ಜನರಲ್ಲಿ ಕೊಂಚ ಸಮಾಧಾನವನ್ನು ಮೂಡಿಸಿದೆ. ಈಗಾಗಲೇ ಭೂಮಿಯನ್ನು ಉಳುಮೆ ಮಾಡಿಸಿದ್ದ ಕೆಲ ರೈತರು ಬಿತ್ತನೆಗೆ ಚಿಂತನೆ ನಡೆಸಿದ್ದಾರೆ. ಆದರೆ ಇನ್ನು ಮಳೆಯ ಆಗತ್ಯವಿದೆ.
ಇತ್ತ ಮಳೆಗಾಗಿ ದೇವರ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ತಾಲೂಕಿನ ಪೊನ್ನಾಚಿ, ಶಾಗ್ಯ, ದೊಮ್ಮನಗದ್ದೆ, ಮಂಗಲ ಹಾಗೂ ಇನ್ನಿತರ ಗ್ರಾಮದ ಜನರು ದೇವರು ಕೊನೆಗೂ ನಮ್ಮ ಗ್ರಾಮಕ್ಕೆ ಮಳೆ ಕರುಣಿಸಿದ ಎಂಬ ಭಕ್ತಿ ಭಾವವನ್ನು ವ್ಯಕ್ತಪಡಿಸಿದ್ದಾರೆ.