ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಮಾಜಿ ಶಾಸಕ ಆರ್.ನರೇಂದ್ರ ಅವರಿಗೆ ಆಶಾಪ್ಪ ಅವರು ಪ್ರಮಾಣ ಪತ್ರ ವಿತರಿಸಿದರು. ನಾಗೇಶ್, ಚೇತನ್ ದೊರೆರಾಜು ಇದ್ದರು.
- ಪ್ರಮಾಣ ಪತ್ರ ವಿತರಣೆ
- ಬೆಂಬಲಿಗರಿಂದ ಸಂಭ್ರಮಾಚರಣೆ
ಹನೂರು : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಹನೂರು ಕ್ಷೇತ್ರದ ಮಾಜಿ ಶಾಸಕ ಆರ್.ನರೇಂದ್ರ ಆಯ್ಕೆಯಾಗಿದ್ದು, ಚುನಾವಣಾಧಿಕಾರಿ ಆಶಾಪ್ಪ ಬುಧವಾರ ಪ್ರಮಾಣ ಪತ್ರ ವಿತರಿಸಿದರು.
ಎಂಸಿಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಜೂ. 26ರಂದು ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರದಿಂದ ಶಾಸಕ ಪುಟ್ಟರಂಗಶೆಟ್ಟಿ ಒಂದು ಮತದಿಂದ, ಗುಂಡ್ಲುಪೇಟೆ ಕ್ಷೇತ್ರದಿಂದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಯಳಂದೂರು ಕ್ಷೇತ್ರದಿಂದ ಜಯರಾಂ ಅವಿರೋಧ ಆಯ್ಕೆಯಾಗಿದ್ದರು.
ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ನರೇಂದ್ರ ಅವರು 9 ಮತ ಪಡೆದಿದ್ದರು. ಇವರ ಪ್ರತಿ ಸ್ಪರ್ಧಿಯಾಗಿದ್ದ ಮಲ್ಲೇಶ್ ಅವರು 8 ಮತ ಪಡೆದಿದ್ದರು. ಬೈಲೂರು ಪ್ರಾಥಮಿಕ ಕೃಷಿ ಪತ್ತಿನ ಸದಸ್ಯ ನಿಯಮಬಾಹಿರವಾಗಿ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಹೈಕೋರ್ಟ್ ಒಂದು ಮತವನ್ನು ಹೊರತುಪಡಿಸಿ ಎಣಿಕೆ ನಡೆದಿರುವ ಮತಗಳ ಪೈಕಿ ಹೆಚ್ಚು ಮತ ಪಡೆದಿರುವ ಅಭ್ಯರ್ಥಿಯನ್ನು ನಿರ್ದೇಶಕರಾಗಿ ಘೋಷಣೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಎಂಸಿಡಿಸಿಸಿ ಬ್ಯಾಂಕ್‌ನ ಚುನಾವಣಾ ಅಧಿಕಾರಿಯಾಗಿದ್ದ ಆಶಾಪ್ಪ ಅವರು ಆರ್.ನರೇಂದ್ರ ಅವರಿಗೆ ಎಂಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಎಂದು ಘೋಷಣೆ ಮಾಡಿ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗೇಶ್, ಕಾಂಗ್ರೆಸ್ ಮುಖಂಡ ಚೇತನ್ ದೊರೆರಾಜ್ ಇದ್ದರು.
ಅಭಿಮಾನಿಗಳಿಂದ ಸಂಭ್ರಮ ವ್ಯಕ್ತ :
ಮಾಜಿ ಶಾಸಕ ಆರ್.ನರೇಂದ್ರ ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದರೆ, ಇನ್ನು ಕೆಲವರು ಆರ್.ನರೇಂದ್ರ ಅವರನ್ನು ಭೇಟಿಯಾಗಿ ಶುಭಾಶಯ ಕೋರಿ ಸಂಭ್ರಮ ವ್ಯಕ್ತಪಡಿಸಿದರು.