ಚಾಮರಾಜನಗರದ ಪುಟ್ಟಮ್ಮಣ್ಣಿ ಪಾರ್ಕ್‌ನಲ್ಲಿ ಡಿಸಿ ಶ್ರೀರೂಪಾ ಮತ್ತು ವಿವಿಧ ಸಂಘ-ಸಂಸ್ಥೆಗಳು ಬುಧವಾರ ಸ್ವಚ್ಚತಾ ಕಾರ್ಯ ಕೈಗೊಂಡರು. ದೊಡ್ಡರಾಯಪೇಟೆ ಗಿರೀಶ್, ಶಮಿತ್ ಕುಮಾರ್, ಬಿ.ಪಿ. ವಿಶ್ವಾಸ್, ರಕ್ಷಿತಾ, ಸತೀಶ್ ಇತರರು ಇದ್ದರು. 
ಚಾಮರಾಜನಗರ

ಡಿಸಿ ನೇತೃತ್ವದಲ್ಲಿ ಪುಟ್ಟಮ್ಮಣಿ ಪಾರ್ಕ್ ಸ್ವಚ್ಚತೆ

ಪ್ರಮುಖ ಮುಖ್ಯಾಂಶಗಳು

  • ಶ್ರಮದಾನದಲ್ಲಿ ಕೈ ಜೋಡಿಸಿದ ಸಂಘ-ಸಂಸ್ಥೆಗಳು
  • ಉದ್ಯಾನಗಳ ಅಭಿವೃದ್ಧಿಗೆ ಪಣ ತೊಟ್ಟಿರುವ ಡಿಸಿ
ಚಾಮರಾಜನಗರ: ನಗರದ ಪುಟ್ಟಮ್ಮಣಿ ಉದ್ಯಾನವನ್ನು ಜಿಲ್ಲಾಧಿಕಾರಿ ಶ್ರೀರೂಪಾ ನೇತೃತ್ವದಲ್ಲಿ ಬುಧವಾರ ವಿವಿಧ ಸಂಘ-ಸಂಸ್ಥೆಗಳು ಸ್ವಚ್ಛತೆ ಮಾಡಿದರು.
ಜಿಲ್ಲಾಡಳಿತ, ನಗರಸಭೆ, ರೋಟರಿ ಸಿಲ್ಕ್ ಸಿಟಿ, ಸಂಜೀವಿನಿ ಟ್ರಸ್ಟ್ ಹಾಗೂ ಯೂತ್ ಫಾರ್ ಸೇವಾ ಸಹಯೋಗದಲ್ಲಿ ಮುಂಜಾನೆ 6.30ರಿಂದ 9.30ವರೆಗೆ ಸಂಘ-ಸಂಸ್ಥೆ ಸದಸ್ಯರು, ಪೌರಕಾರ್ಮಿಕರು, ಅಧಿಕಾರಿಗಳು ಸ್ವಚ್ಚತಾ ಕಾರ್ಯ ಮಾಡಿದರು. ಈ ಶ್ರಮದಾನದ ಸವಿನೆನಪಿಗಾಗಿ ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಅವರು ಡಿಸಿ ಶ್ರೀರೂಪಾ ಅವರ ಕೈಯಿಂದ ಒಂದು ಗಿಡ ನೆಡಿಸಿದರು. ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಪೌರಕಾರ್ಮಿಕರಿಗೆ ತಂಪುಪಾನೀಯ ವಿತರಿಸಲಾಯಿತು.
ಉದ್ಯಾನವನದಲ್ಲಿ ನೀರಿನ ಸಂಪರ್ಕ ವ್ಯವಸ್ಥೆಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ಉದ್ಯಾನವನವನ್ನು ಪರಿಶೀಲಿಸಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ನಗರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉದ್ಯಾನವನದ ನಿರ್ವಹಣೆಗಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ ಮಾತನಾಡಿ, ಜನರಿಗೆ ಸ್ವಚ್ಚತಾ ಜಾಗೃತಿ ಮೂಡಿಸಲು ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ರಜೆದಿನಗಳು ಸೇರಿದಂತೆ ಪ್ರತಿವಾರ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಗುತ್ತದೆ. ಪಟ್ಟಣದ ಸ್ವಚ್ಚತೆಗಾಗಿ ಕಸ ಸಂಗ್ರಹಣೆ ಮಾಡುವ ಸಿಬ್ಬಂದಿಗೆ ತರಬೇತಿ ಅವಶ್ಯವಾಗಿದೆ ಎಂದರು.
ನಗರಸಭೆ ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್, ಪರಿಸರ ಇಂಜಿನಿಯರ್ ರೂಪಾ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ರೋಟರಿ ಸಿಲ್ಕ್‌ಸಿಟಿ ಸಹಾಯಕ ಗೌರ‌್ನರ್ ದೊಡ್ಡರಾಯಪೇಟೆ ಗಿರೀಶ್, ಅಧ್ಯಕ್ಷ ಶಮಿತ್ ಕುಮಾರ್, ಬಿ.ಪಿ. ವಿಶ್ವಾಸ್, ರಕ್ಷಿತಾ, ಸಂಜೀವಿನಿ ಟ್ರಸ್ಟ್‌ನ ಸತೀಶ್, ಹಸಿರು ಪಡೆಯ ಕಾರ್ಯಕರ್ತರು, ಯೂತ್ ಫಾರ್ ಸೇವಾ ಪದಾಧಿಕಾರಿಗಳು ಮತ್ತು ಇತರರು ಇದ್ದರು.

ಗಮನ ಸೆಳೆದಿದ್ದ ವರದಿ:ಜಿಲ್ಲೆಯ ಉದ್ಯಾನಗಳು ಹಾಳಾಗಿರುವ ಕುರಿತು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮಾ.10ರಂದು ‘ನಿರ್ವಹಣೆ ಇಲ್ಲದೆ ಸೊರಗಿದ ಪಾರ್ಕ್‌ಗಳು’ ಎಂಬ ಶೀರ್ಷಿಕೆಯಡಿ ಲೌಡ್ ಸ್ಪೀಕರ್ ಪ್ರಕಟಿಸಿತ್ತು. ಜಿಲ್ಲೆಯ ಹಲವು ಉದ್ಯಾನಗಳು ಅಧ್ವಾನ ಸ್ಥಿತಿ ತಲುಪಿರುವುದು, ರಸ್ತೆ ಬದಿಯಲ್ಲಿ ವಾಯುವಿಹಾರ ಮಾಡಬೇಕಾದ ಪರಿಸ್ಥಿತಿ ಇರುವ ಕುರಿತು ಸಾರ್ವಜನಿಕರು ಸಮಸ್ಯೆ ಹೇಳಿಕೊಂಡಿದ್ದರು. ಡಿಸಿ ಶ್ರೀರೂಪಾ ಮಾತನಾಡಿ, ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದಿದ್ದರು. ಅದರಂತೆ, ಸಂಘ-ಸಂಸ್ಥೆಗಳ ಸಹಕಾರ ಪಡೆದು ಖುದ್ದು ತಾವೇ ಆಗಮಿಸಿ ಉದ್ಯಾನ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

"

ಪುಟ್ಟಮ್ಮಣಿ ಉದ್ಯಾನ ತುಂಬಾ ಸುಂದರವಾಗಿದೆ. ಇದನ್ನು ಹಸರೀಕರಣಗೊಳಿಸುವ ನಿಟ್ಟಿನಲ್ಲಿ ಜನರಿಗೆ ಪರಿಸರ ಜಾಗೃತಿ ಮೂಡಿಸಬೇಕಾಗಿದೆ. ಸ್ವಚ್ಚತಾ ಕಾರ್ಯಕ್ಕೆ ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ.